ಮೈಸೂರಿನಲ್ಲಿ ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯರ ಸ್ವಯಂಕೃತ ಅಪರಾಧ ಕಾರಣ: ಕುಮಾರಸ್ವಾಮಿ
ಬೆಂಗಳೂರು, ಸೆ. 23: ಉಪ ಚುನಾವಣೆಯನ್ನು ಜೆಡಿಎಸ್ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ನಮ್ಮ ಕುಟುಂಬದ ಯಾವ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇನ್ನು ಎರಡು ದಿನಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. ಕಾಂಗ್ರೆಸ್ ಹಾಗೂ ಬಿಜೆಪಿಗಿಂತ ಹೆಚ್ಚಿನ ಸ್ಥಾನದಲ್ಲಿ ನಾವು ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಯಾರ ಸಹವಾಸವೂ ಬೇಡ: ನಮಗೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾರ ಸಹವಾಸವೂ ಬೇಡ. 15 ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇವೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಬಲ ನಮ್ಮ ಜತೆಗಿದೆ ಎಂದ ಕುಮಾರಸ್ವಾಮಿ, ಪಕ್ಷದ ಎಲ್ಲ ಕಾರ್ಯಕರ್ತರು ದೇವೇಗೌಡರ ಕುಟುಂಬವೇ ಎಂದರು.
ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಯಂಕೃತ ಅಪರಾಧ ಕಾರಣ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಯಾರ್ಯಾರು ಎಲ್ಲೆಲ್ಲಿ ಹೇಗೆಲ್ಲ ನಡೆದುಕೊಂಡಿದ್ದಾರೆಂಬುದು ನನಗೆ ಗೊತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಮುನಿಯಪ್ಪ ಸೋಲಿಗೆ ಕಾರಣರ್ಯಾರು: ಮಂಡ್ಯ ಮತ್ತು ತುಮಕೂರು ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಏನು ಮಾಡಿದ್ದಾರೆಂದು ಗೊತ್ತು. ಇವರ ನಾಟಕವೂ ನನಗೆ ತಿಳಿದಿದೆ. ಆದರೆ, ಕೋಲಾರ ಕ್ಷೇತ್ರದಲ್ಲಿ ಏಳು ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಸೋಲಿಗೆ ಯಾರು ಕಾರಣ ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದ ವರಿಷ್ಟರ ಬಗ್ಗೆ ನಾನು ಯಾವುದೇ ಕಾರಣಕ್ಕೂ ದೋಷಾರೋಪ ಮಾಡುವುದಿಲ್ಲ. ಲೋಕಸಭೆ ಚುನಾವಣೆಯಿಂದ ನಾವು ಪಾಠ ಕಲಿತಿದ್ದು, ಉಪ ಚುನಾವಣೆಯಲಿ ಯಾರ ಸಹವಾಸವಿಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ ಎಂದು ಕುಮಾರಸ್ವಾಮಿ ನುಡಿದರು.