16 ಸಾವಿರ ಪೊಲೀಸ್ ಕಾನ್‌ಸ್ಟೆಬಲ್‌ಗಳ ನೇಮಕ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Update: 2019-09-23 14:26 GMT

ಕಲಬುರಗಿ, ಸೆ. 23: ಪೊಲೀಸ್ ಇಲಾಖೆ ಸದೃಢಗೊಳಿಸುವ ನಿಟ್ಟಿನಲ್ಲಿ ಮುಂದಿನ ಎರಡು ವರ್ಷದೊಳಗೆ 16 ಸಾವಿರ ಮಂದಿ ಪೊಲೀಸ್ ಕಾನ್‌ಸ್ಟೆಬಲ್ಸ್ ಹಾಗೂ 630 ಪಿಎಸ್ಸೈಗಳ ನೇಮಕ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಇಲಾಖೆಯನ್ನು ಮತ್ತಷ್ಟು ಸದೃಢಗೊಳಿಸಲು ನಿರ್ಧರಿಸಲಾಗಿದ್ದು, ಸರಕಾರ ಸಿಬ್ಬಂದಿಗಳ ನೇಮಕಕ್ಕೆ ಮುಂದಾಗಿದೆ ಎಂದರು.

ಇಲಾಖೆಯನ್ನು ತಾಂತ್ರಿಕವಾಗಿ ಅಭಿವೃದ್ಧಿ ಪಡಿಸಲು ದಿಟ್ಟಹೆಜ್ಜೆ ಇಟ್ಟಿದೆ. ಪ್ರಮುಖವಾಗಿ ಸೈಬರ್ ಕ್ರೈಂ ಪಡೆಯನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದ ಅವರು, ಸಿಬ್ಬಂದಿ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ಸರಕಾರ ಬದ್ಧ ಎಂದು ಪುನರುಚ್ಚರಿಸಿದರು.

ಪೊಲೀಸ್ ಸಿಬ್ಬಂದಿಗೆ ಮುಂದಿನ ಎರಡು-ಮೂರು ವರ್ಷದೊಳಗೆ ಶೇ.60ರಷ್ಟು ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುವುದು ಎಂದ ಅವರು, ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸಲು ಸರಕಾರ ಅಗತ್ಯ ಕ್ರಮ ವಹಿಸಲಿದೆ ಎಂದರು.

ಸಂಸದ ಡಾ.ಉಮೇಶ್ ಜಾಧವ್, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಸೇರಿದಂತೆ ಇನ್ನಿತರ ಮಖಂಡರು ಈ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News