ಶಿಕ್ಷಕರ ವರ್ಗಾವಣೆಗೆ ಚುನಾವಣಾ ಆಯೋಗ ಸಮ್ಮತಿ

Update: 2019-09-23 14:32 GMT

ಬೆಂಗಳೂರು, ಸೆ.23: ಕರ್ನಾಟಕ ನಾಗರಿಕ ಸೇವಾ ನಿಯಮಗಳನುಸಾರ ಶಿಕ್ಷಕರ ವರ್ಗಾವಣೆಗಳನ್ನು ನಡೆಸಲು ಚುನಾವಣಾ ಆಯೋಗ ಅನುಮತಿ ನೀಡಿದೆ.

ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಅದಕ್ಕಾಗಿ ಶಿಕ್ಷಕರ ವರ್ಗಾವಣೆಗೆ ಅನುಮತಿ ಕೋರಿ ರಾಜ್ಯ ಶಿಕ್ಷಣ ಇಲಾಖೆಯ ಆಯುಕ್ತರು ಚುನಾವಣಾಧಿಕಾರಿಗೆ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಆಯೋಗವು ಶಿಕ್ಷಕರ ವರ್ಗಾವಣೆ ನಡೆಸಲು ಅನುಮತಿ ನೀಡಿದೆ.

ಶಿಕ್ಷಕರ ವರ್ಗಾವಣೆಯು ನಿಯಮಗಳನುಸಾರ ಕೇಂದ್ರೀಕೃತ ನಿಯಂತ್ರಿತ ವ್ಯವಸ್ಥೆಯಲ್ಲಿ ಎಲೆಕ್ಟ್ರಾನಿಕ್ ಮಾದರಿಯಲ್ಲಿನ ದತ್ತಾಂಶಗಳನ್ನು ಬಳಸಿಕೊಂಡು ಆನ್‌ಲೈನ್ ಮೂಲಕ ಜಿಲ್ಲಾ ಮಟ್ಟದಲ್ಲಿ ಸಂಪೂರ್ಣವಾಗಿ ಅಧಿಕಾರಿಗಳು ಹಮ್ಮಿಕೊಳ್ಳುವ ಪ್ರಕ್ರಿಯೆಯಾಗಿದೆ. ಈ ವರ್ಗಾವಣೆಗಳು ವಿವೇಚನೆ ವರ್ಗಾವಣೆಯಾಗಿರುವುದಿಲ್ಲ ಎಂಬುದನ್ನು ಪರಿಗಣಿಸಿ ಚುನಾವಣಾ ಆಯೋಗ ಅನುಮತಿ ನೀಡಿದೆ.

ಕಳೆದ ಡಿಸೆಂಬರ್‌ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪೂರೈಸಲಾಗಿದ್ದು, ಶಿಕ್ಷಕರ ಖಾಲಿ ಹುದ್ದೆಯ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಆಯೋಗ ಅನುಮತಿ ನೀಡಿದೆ.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಎಲ್ಲ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ವರ್ಗಾಯಿತ ಶಿಕ್ಷಕರ ಬಿಡುಗಡೆ ಹಾಗೂ ಹಾಜರಾತಿ ಕ್ರಮಗಳನ್ನು ಕೈಗೊಳ್ಳತಕ್ಕದ್ದಲ್ಲ ಎಂದು ಚುನಾವಣಾ ಆಯೋಗ ಸೂಚಿಸಿ ವರ್ಗಾವಣೆಗೆ ಅನುಮತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News