ಬಣ್ಣ ಬದಲಿಸಿದ ವೃಷಭಾವತಿ ನದಿ ನೀರು: ಸ್ಥಳೀಯರಲ್ಲಿ ಆತಂಕ
ರಾಮನಗರ, ಸೆ.23: ಬೆಂಗಳೂರು ಹೊರವಲಯದ ವೃಷಭಾವತಿ ನದಿ ನೀರಿನ ಬಣ್ಣ ದಿಢೀರ್ ಬದಲಾಗಿದ್ದು, ನದಿ ಪಾತ್ರದ ಜನರು ಆತಂಕಗೊಂಡಿದ್ದಾರೆ.
ಕಪ್ಪು ಬಣ್ಣದ ನದಿ ನೀರು, ಏಕಾಏಕಿ ಹಳದಿ ಬಣ್ಣಕ್ಕೆ ತಿರುಗಿದ್ದು, ಇಲ್ಲಿನ ಅಂಚೇಪಾಳ್ಯ, ಕುಂಬಳಗೂಡು ಸಮೀಪದಲ್ಲಿ ಕಾಣಿಸಿಕೊಂಡಿದೆ. ಕೆಂಗೇರಿಯ ಬೃಹತ್ ಕಾಲುವೆಯ ತ್ಯಾಜ್ಯ ನೀರಿನೊಂದಿಗೆ ಹರಿಯುತ್ತಿದ್ದ ನದಿ ನೀರು, ಬಣ್ಣ ಬದಲಾವಣೆಗೆ ಕಾರಣ ತಿಳಿದುಬಂದಿಲ್ಲ.
ಕಾರ್ಖಾನೆ ನೀರು: ಕಾರ್ಖಾನೆಗಳ ತ್ಯಾಜ್ಯ, ವಿಷಯುಕ್ತ ನೀರನ್ನು ನೇರವಾಗಿ ನದಿಗೆ ಸೇರಿಸಲಾಗುತ್ತಿದೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ರವಿವಾರ ರಾತ್ರಿ ಹೆಚ್ಚಿನ ಪ್ರಮಾಣದ ನೀರನ್ನು ಕಾರ್ಖಾನೆಗಳಿಂದ ಹರಿಬಿಟ್ಟಿರುವ ಕಾರಣ, ಈ ಬಣ್ಣಕ್ಕೆ ಬದಲಾಗಿರಬಹುದು ಎಂದು ಸಾರ್ವಜನಿಕರಲ್ಲಿ ಅನುಮಾನ ವ್ಯಕ್ತವಾಗಿದೆ.
ರಾಜಧಾನಿ ಬೆಂಗಳೂರಿನಿಂದ ಆರಂಭವಾಗುವ ಈ ವೃಷಭಾವತಿ ನದಿಯು, ಪಶ್ಚಿಮಾಭಿಮುಖವಾಗಿ ವಿವಿಧ ಪ್ರದೇಶಗಳ ಮೂಲಕ ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನದ ಪಕ್ಕದಲ್ಲಿ ಹರಿದು ಮುಂದೆ ರಾಮನಗರ ಜಿಲ್ಲೆಯ ಬೈರಮಂಗಲ ಹಾಗೂ ಕನಕಪುರ ತಾಲೂಕಿನಲ್ಲಿ ಹರಿದು ಸಂಗಮದಲ್ಲಿ ಕಾವೇರಿ ನದಿಯನ್ನು ಮುಟ್ಟುತ್ತದೆ ಎಂದು ತಜ್ಞರು ಹೇಳುತ್ತಾರೆ.
ನದಿಗೆ ಸೇರುವ ಒಳಚರಂಡಿ ನೀರನ್ನು ಸಮರ್ಪಕವಾಗಿ ಶುದ್ಧೀಕರಿಸುವ ಕಾರ್ಯಕ್ಕೆ ಜಲಮಂಡಳಿಯು ಮುಂದಾಗಬೇಕಿದೆ. ರಾಜಕಾಲುವೆಯಲ್ಲಿ ಮಳೆ ನೀರು ಹರಿಯುವಂತೆ ಮಾಡಿದಾಗ ಮಾತ್ರ ವೃಷಭಾವತಿ ಪುನುರುಜ್ಜೀವನ ಪಡೆಯಲಿದೆ ಎಂದು ಸ್ಥಳೀಯರು ಹೇಳಿದರು.