ಮದ್ಯದಂಗಡಿಯಲ್ಲಿ ಯುವಕನ ಕೊಲೆ ಪ್ರಕರಣ: ಗುಂಡು ಹಾರಿಸಿ ಆರೋಪಿಯ ಸೆರೆ

Update: 2019-09-23 15:11 GMT

ಬೆಂಗಳೂರು, ಸೆ.23: ಮದ್ಯದಂಗಡಿಯಲ್ಲಿ ಯುವಕನನ್ನು ಕೊಲೆಗೈದಿದ್ದ ಪ್ರಕರಣ ಸಂಬಂಧ ಪಿಸ್ತೂಲಿನಿಂದ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸುವಲ್ಲಿ ತಿಲಕನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿ ತಬ್ರೇಝ್ ಬಂಧಿತ ಆರೋಪಿಯಾಗಿದ್ದು, ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.

ಪ್ರಕರಣ ಸಂಬಂಧ ಪ್ರಮುಖ ಆರೋಪಿ ತಬ್ರೇಝ್‌ನನ್ನು ಸೋಮವಾರ ವಶಕ್ಕೆ ಪಡೆಯಲು ಹೋದಾಗ ಪೊಲೀಸ್ ಪೇದೆ ಆನಂದ್ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ತಬ್ರೇಝ್ ಮೇಲೆ ಗುಂಡು ಹಾರಿಸಿ ಸೆರೆಹಿಡಿದಿದ್ದಾರೆ ಎನ್ನಲಾಗಿದೆ.

ಬಂಧಿತ ಆರೋಪಿ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಕೊಲೆ ಯತ್ನ, ಸುಲಿಗೆ, ದರೋಡೆ ಸೇರಿದಂತೆ 11 ಪ್ರಕರಣ ದಾಖಲಾಗಿವೆ. ಇತ್ತೀಚೆಗೆ ಕೆಲ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಬಿಡುಗಡೆ ಆದ ಈತ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮದ್ಯದಂಗಡಿಯೊಂದರಲ್ಲಿ ಆರೋಪಿ ತಬ್ರೇಝ್, ಆನಂದ್, ಮಧು ಹಾಗೂ ಅರ್ಪಿತಾ ಎಂಬ ಮಂಗಳಮುಖಿ ಜತೆ ಗುಂಪು ಕಟ್ಟಿಕೊಂಡು ಮದ್ಯದಂಗಡಿಯ ಕಿಶೋರ್ ಮೇಲೆ ಹಲ್ಲೆ ನಡೆಸಿ, ಕೊಲೆಗೈದಿದ್ದರು. ಈ ಸಂಬಂಧ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News