ನೆರೆ ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ: ಸಿದ್ದರಾಮಯ್ಯ

Update: 2019-09-24 13:26 GMT

ಬೆಳಗಾವಿ, ಸೆ.24: ಉತ್ತರ ಕರ್ನಾಟಕ ಭಾಗದ ನೆರೆ ಸಂತ್ರಸ್ತರು ಸೂಕ್ತ ಪರಿಹಾರ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 105 ವರ್ಷಗಳ ಬಳಿಕ ಇಷ್ಟೊಂದು ಭೀಕರ ಪ್ರಮಾಣದ ಪ್ರವಾಹ ಪರಿಸ್ಥಿತಿ ಉಂಟಾಯಿತು. ಲಕ್ಷಾಂತರ ಜನ ನಿರ್ಗತಿಕರಾಗಿದ್ದಾರೆ. ಸುಮಾರು 8 ಲಕ್ಷಕ್ಕೂ ಅಧಿಕ ಎಕರೆ ಕೃಷಿ ಭೂಮಿ ಹಾಳಾಗಿದೆ. ಜನಸಾಮಾನ್ಯರು, ರೈತರು, ಕೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸಂತ್ರಸ್ತರ ಕಣ್ಣೀರು ಹಾಗೂ ಅಸಹಾಯಕತೆ ಕಂಡು ಬರುತ್ತಿಲ್ಲ. ಕೇಂದ್ರದ ಗೃಹ ಸಚಿವ ಹಾಗೂ ಹಣಕಾಸು ಸಚಿವೆ ಸ್ವತಃ ಬಂದು ವೈಮಾನಿಕ ಸಮೀಕ್ಷೆ ನಡೆಸಿ ಹೋಗಿದ್ದರೂ ಈವರೆಗೆ ಒಂದು ನಯಾಪೈಸೆ ನೆರವನ್ನು ಬಿಡುಗಡೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಬಿಜೆಪಿಯವರದ್ದು ಮನುಷ್ಯ ಚರ್ಮವೋ, ಇಲ್ಲ ಎಮ್ಮೆ ಚರ್ಮವೋ ಗೊತ್ತಾಗುತ್ತಿಲ್ಲ. ಹಸಿರು ಶಾಲು ಹಾಕಿಕೊಂಡು ತನ್ನನ್ನು ರೈತ ಎನ್ನುವ ಮುಖ್ಯಮಂತ್ರಿ ಯಡಿಯೂರಪ್ಪಗೆ ರೈತರ ಕಷ್ಟ ಗೊತ್ತಾಗುವುದಿಲ್ಲವೇ? ಜನರ ಕಣ್ಣೀರು ಒರೆಸಲು ಸಾಧ್ಯವಾಗದಿದ್ದರೆ, ಅಧಿಕಾರದಿಂದ ಕೆಳಗಿಳಿದು ಹೋಗಲಿ ಎಂದು ಅವರು ಹೇಳಿದರು.

ರಾಜ್ಯದಲ್ಲಿ ನೆರೆ ಹಾವಳಿಯಿಂದ ಯಾವುದೇ ಸಮಸ್ಯೆಯೇ ಆಗಿಲ್ಲವೇನೋ ಎಂಬ ರೀತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವರ್ತಿಸುತ್ತಿದ್ದಾರೆ. ಕೇಂದ್ರದ ಮೇಲೆ ಒತ್ತಡ ಹೇರಲು ಈ ಬಿಜೆಪಿ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಯಡಿಯೂರಪ್ಪರನ್ನು ಟೀಕಿಸಲು ನಾವು ಇಲ್ಲಿ ಸಮಾವೇಶ ಮಾಡುತ್ತಿಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗದೆ ಇದ್ದಲ್ಲಿ, ಅಧಿಕಾರದಲ್ಲಿ ಮುಂದುವರೆಯುವ ಅಗತ್ಯವೇನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಅಧಿವೇಶನ ನಡೆಸಲು ಭಯ: ನೆರೆ ಸಂತ್ರಸ್ತರು ಸುವರ್ಣ ವಿಧಾನಸೌಧಕ್ಕೆ ಎಲ್ಲಿ ಮುತ್ತಿಗೆ ಹಾಕುತ್ತಾರೋ ಎಂಬ ಭಯದಿಂದಾಗಿ, ಯಡಿಯೂರಪ್ಪ ಇಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಭಯ ಪಡುತ್ತಿದ್ದಾರೆ. ಆದುದರಿಂದ, ಬೆಂಗಳೂರಿನಲ್ಲೆ ಅಧಿವೇಶನ ನಡೆಸಲು ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಸರಕಾರ ಒಂದು ವೇಳೆ ಬೆಳಗಾವಿಯಲ್ಲಿ ಅಧಿವೇಶನ ನಡೆಸದಿದ್ದರೆ, ಬೆಂಗಳೂರಿನಲ್ಲಿ ಯಾವುದೇ ಕಾರಣಕ್ಕೂ ಅಧಿವೇಶನ ನಡೆಸಲು ಬಿಡುವುದಿಲ್ಲ. ಇಲ್ಲಿನ ಜನರ ಸಂಕಷ್ಟಗಳನ್ನು ಪರಿಹರಿಸದೆ ಪಲಾಯನ ಮಾಡಲು ಸರಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಯಡಿಯೂರಪ್ಪಗೆ ಈಗ ಅನರ್ಹ ಶಾಸಕರ ಚಿಂತೆ ಕಾಡುತ್ತಿರುವುದರಿಂದ ಪದೇ ಪದೇ ಹೊಸದಿಲ್ಲಿಗೆ ಹೋಗುತ್ತಿದ್ದಾರೆಯೇ ಹೊರತು, ನೆರೆ ಸಂತ್ರಸ್ತರ ಪರವಾಗಿ ಹೋಗುತ್ತಿಲ್ಲ. ಸರಕಾರವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯದಲ್ಲಿ ನೆರೆ ಹಾಗೂ ಪ್ರವಾಹ ಪರಿಸ್ಥಿತಿ ಉಂಟಾಗಿ 50 ದಿನಗಳಾಗಿವೆ. ಆದರೆ, ಈವರೆಗೆ ಒಂದೇ ಒಂದು ರೂ.ಪರಿಹಾರ ಹಣ ನೀಡಿಲ್ಲ. ಕೇಂದ್ರದಲ್ಲಿ ಅಧಿಕಾರ ನಡೆಸಿದಂತಹ ಈ ಹಿಂದಿನ ಯಾವ ಸರಕಾರಗಳು ನಮ್ಮ ರಾಜ್ಯದ ಬಗ್ಗೆ ಇಷ್ಟೊಂದು ನಿರ್ಲಕ್ಷ ತೋರಿರಲಿಲ್ಲ ಎಂದು ಕಿಡಿಗಾರಿದರು.

ನೆರೆ ಹಾವಳಿಗೆ ತುತ್ತಾಗಿರುವ ಪ್ರದೇಶಗಳಲ್ಲಿ ಬಿಜೆಪಿ ಪಕ್ಷದ ಸಂಸದರೇ ಗೆದ್ದಿದ್ದಾರೆ. ಆದರೆ, ಯಾವೊಬ್ಬ ಸಂಸದರೂ ಕೇಂದ್ರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿಲ್ಲ. ಬೆಳಗಾವಿಯಿಂದ ಗೆದ್ದು ಕೇಂದ್ರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿರುವ ಸುರೇಶ್ ಅಂಗಡಿಗೆ ನಾಚಿಕೆಯಾಗುವುದಿಲ್ಲವೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಿ ಎಂದು ಒತ್ತಾಯಿಸಿದರೂ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ. ಕೇಂದ್ರ ಸರಕಾರದಿಂದ ನೆರವು ಬರದೇ ಇರುವುದರಿಂದ, ನೆರೆ ಪರಿಹಾರಕ್ಕಾಗಿ ಬೇರೆ ಬೇರೆ ಇಲಾಖೆಗಳಲ್ಲಿನ ಹಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

ಕೇಂದ್ರ ಸರಕಾರ ರಾಜ್ಯಕ್ಕೆ 30 ಸಾವಿರ ಕೋಟಿ ರೂ.ಪರಿಹಾರ ನೀಡುವವರೆಗೆ ನಾವು ಕೇವಲ ಉತ್ತರ ಕರ್ನಾಟಕ ಅಷ್ಟೇ ಅಲ್ಲ, ದಿಲ್ಲಿಯಲ್ಲೂ ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಹೇಳಿದರು.

ಪ್ರತಿಭಟನಾ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಎಸ್.ಆರ್.ಪಾಟೀಲ್, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಆನಂದ ನ್ಯಾಮಗೌಡ, ಪ್ರಕಾಶ್ ರಾಥೋಡ್, ಐವಾನ್ ಡಿ’ಸೋಜಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News