×
Ad

ಕನ್ನಡ ಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಗದಿದ್ದರೆ ಹೋರಾಟ: ನಟ ಗಣೇಶ್ ಎಚ್ಚರಿಕೆ

Update: 2019-09-24 19:53 IST

ಬೆಂಗಳೂರು, ಸೆ.24: ನಾನು ಪ್ರೀತಿಯಿಂದ ಗೀತಾ ಸಿನಿಮಾ ಮಾಡಿದ್ದೇನೆ. ಗೋಕಾಕ್ ಚಳವಳಿಯ ಹಿನ್ನೆಲೆ ಇಟ್ಟುಕೊಂಡು ಹೊಸೆದಿರುವುದು ಕಥೆ ಇದು. ಪರಭಾಷೆ ಸಿನಿಮಾಗಳಿಗೆ ಅನುಕೂಲ ಕಲ್ಪಿಸಲು ನನ್ನ ಸಿನಿಮಾವನ್ನು ಥಿಯೇಟರ್‌ನಿಂದ ತೆಗೆಯಲು ಮುಂದಾದರೆ ಹೋರಾಟಕ್ಕಿಳಿಯುವುದು ನಿಶ್ಚಿತ ಎಂದು ನಟ ಗಣೇಶ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಗಣೇಶ್, ನನ್ನ ಸಿನಿಮಾದ ತಂಟೆಗೆ ಕೈ ಹಾಕಬೇಡಿ. ಆ ರೀತಿ ನಡೆದುಕೊಂಡರೆ ನಾನು ಸುಮ್ಮನಿರುವುದಿಲ್ಲ. ಚಿತ್ರಮಂದಿರದ ಮುಂದೆ ಬಂದು ಪ್ರತಿಭಟನೆ ನಡೆಸುತ್ತೇನೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಗೀತಾ ಸಿನಿಮಾ ಸೆ.27ರಂದು ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 2ರಂದು ಚಿರಂಜೀವಿ ನಟನೆಯ ಬಹುನಿರೀಕ್ಷಿತ ಸೈರಾ ನರಸಿಂಹ ರೆಡ್ಡಿ ತೆರೆಕಾಣುತ್ತಿದೆ. ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿರುವ ಈ ಸಿನಿಮಾ ಕರ್ನಾಟಕದ ಬಹಳಷ್ಟು ಥಿಯೇಟರ್‌ಗಳಿಗೆ ಲಗ್ಗೆ ಇಡುತ್ತದೆ. ಹಾಗಾಗಿ, ಈ ವಾರ ತೆರೆಕಾಣುತ್ತಿರುವ ಗೀತಾ, ಕಿಸ್ ಹಾಗೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಎದುರಾಗಿದೆ.

ಗೀತಾ ಅಪ್ಪಟ ಕನ್ನಡ ಚಿತ್ರ. ಕನ್ನಡ ಪರವಾದ ಸಿನಿಮಾ. ಪ್ರಥಮ ಬಾರಿಗೆ ಗೋಕಾಕ್ ಚಳವಳಿಯನ್ನು ತೆರೆಯ ಮೇಲೆ ತರುತ್ತಿದ್ದೇವೆ. ಇದಕ್ಕಾಗಿ ಚಿತ್ರತಂಡ ಸಾಕಷ್ಟು ಶ್ರಮವಹಿಸಿದೆ. ಪರಭಾಷೆಯ ಸಿನಿಮಾಗಳು ಏನಾಗುತ್ತವೆಯೋ ನನಗೆ ಗೊತ್ತಿಲ್ಲ. ಅದೇ ದಿನದಂದು ಹಲವು ಕನ್ನಡ ಸಿನಿಮಾಗಳು ಬಿಡುಗಡೆಯಾದರೂ ನಮ್ಮ ಅಭ್ಯಂತರವಿಲ್ಲ. ಆದರೆ, ಪರಭಾಷೆಯ ಸಿನಿಮಾಗಳಿಗೆ ಅವಕಾಶ ಅನುಕೂಲ ಕಲ್ಪಿಸಲು ಕನ್ನಡ ಸಿನಿಮಾಗಳ ಮೇಲೆ ಗದಾಪ್ರಹಾರ ಸಲ್ಲದು ಎಂದು ಹೇಳಿದರು.

ದಕ್ಷಿಣ ಭಾರತದ ಚಿತ್ರಗಳಿಗೆ ಮಾತ್ರವೇ ಪೈರಸಿ ಕಾಟ ತಟ್ಟುತ್ತಿದೆ. ಗೀತಾ ಚಿತ್ರವನ್ನು ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಮೂರು ವಾರಗಳ ಬಳಿಕ ಬೇರೆ ಕಡೆಯಲ್ಲೂ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಪೈರಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಆಯುಕ್ತರಿಗೂ ಮನವಿ ಸಲ್ಲಿಸಲಾಗಿದೆ ಎಂದು ನಿರ್ಮಾಪಕ ಸೈಯದ್ ಸಲಾಂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News