ಮೊಮ್ಮಗನನ್ನು ಕೆರೆಗೆ ದೂಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಅಜ್ಜಿ: ಬಾಲಕ ಮೃತ್ಯು

Update: 2019-09-24 14:48 GMT

ಮಂಡ್ಯ, ಸೆ.24: ಕೃಷ್ಣರಾಜಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಮಾರುತಿ ನಗರದಲ್ಲಿ ವಾಸವಾಗಿರುವ ಸಾವಿತ್ರಮ್ಮ ಎಂಬ ವಯೋವೃದ್ಧೆಯು ಆತನ ಮೊಮ್ಮಗನನ್ನು ಕೈಕಾಲು ಕಟ್ಟಿ ಸಿಂದಘಟ್ಟ ಗ್ರಾಮದ ಕೆರೆಯ ನೀರಿಗೆ ಹಾಕಿ ಸಾಯಿಸಿ, ತಾನೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದು, ಉಯ್ಗೋನಹಳ್ಳಿ ಗ್ರಾಮಸ್ಥರು ವೃದ್ಧೆಯನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಾರುತಿನಗರ ಬಡಾವಣೆಯ ಶೆಡ್ ಒಂದರಲ್ಲಿ ತನ್ನ ಮಗಳು ಲಕ್ಷ್ಮೀ(35) ಮತ್ತು 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪ್ರಜ್ವಲ್(11) ಜೊತೆ ಸಾವಿತ್ರಮ್ಮ(65) ವಾಸವಾಗಿದ್ದಳು. ಕಳೆದ 20 ದಿನಗಳ ಹಿಂದೆ ತನ್ನ ಮಗಳು ಲಕ್ಷ್ಮಿ ಮಂಗಳೂರು ಮೂಲದ ವ್ಯಕ್ತಿಯೊಂದಿಗೆ ಓಡಿಹೋಗಿದ್ದಳು ಎನ್ನಲಾಗಿದೆ. ಮಗಳು ಪರಪುರುಷನ ಜತೆ ಓಡಿಹೋದ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿದ ಸಾವಿತ್ರಮ್ಮ ಮೊಮ್ಮಗನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಲು ನಿರ್ಧಾರಿಸಿದ್ದು, ಅದರಂತೆ ಸೋಮವಾರ ಮೊಮ್ಮಗ ಪ್ರಜ್ವಲ್‍ನನ್ನು ಹಬ್ಬಕ್ಕೆ ಹೋಗಬೇಕೆಂದು ಶಾಲೆಯಿಂದ ಶಿಕ್ಷಕರ ಅನುಮತಿಯನ್ನು ಪಡೆದುಕೊಂಡು ಮನೆಗೆ ಕರೆದುಕೊಂಡು ಹೋಗಿದ್ದಾಳೆ.

ಶಾಲೆಯಿಂದ ನೇರವಾಗಿ ಮಾರುತಿ ನಗರದಿಂದ 3 ಕಿ.ಮೀ ದೂರದಲ್ಲಿರುವ ಸಿಂದಘಟ್ಟ ಗ್ರಾಮದ ಕೆರೆಯ ಬಳಿ ಪ್ರಜ್ವಲ್‍ನನ್ನು ಕರೆದುಕೊಂಡು ಹೋಗಿ ಕೈಕಾಲುಗಳನ್ನು ಕಟ್ಟಿಹಾಕಿ ಶಾಲಾ ಉಡುಪಿನಲ್ಲಿಯೇ ಕೆರೆಗೆ ತಳ್ಳಿದ್ದು, ಬಳಿಕ ತಾನೂ ಕೆರೆಗೆ ಹಾರಲು ಸಿದ್ಧವಾಗುತ್ತಿದ್ದ ವೇಳೆ ಕೆರೆಯ ಬದಿಯಲ್ಲಿದ್ದ ಸಾರ್ವಜನಿಕರು ಗಮನಿಸಿ ನೀರಿಗೆ ಬೀಳದಂತೆ ತಡೆದು ಕೃಷ್ಣರಾಜಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಜ್ವಲ್ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಠಾಣಾಧಿಕಾರಿ ಶ್ರೀನಿವಾಸರಾವ್ ಮತ್ತು ಹರೀಶ್ ವಿಶ್ವಕರ್ಮ, ಲಕ್ಷ್ಮಣ ಅವರ ನೇತೃತ್ವದಲ್ಲಿ ಭಾರೀ ಸಾಹಸ ನಡೆಸಿ ನೀರಿನಿಂದ ಹೊರ ತೆಗೆಯಲಾಯಿತು. ಶವದ ಮರಣೋತ್ತರ ಪರೀಕ್ಷೆ ಬಳಿಕ, ಪ್ರಜ್ವಲ್ ಮೃತದೇಹವನ್ನು ಆತನ ತಾಯಿ ಲಕ್ಷ್ಮಿಗೆ ಹಸ್ತಾಂತರಿಸಲಾಯಿತು.

ಮಂಗಳೂರಿನಲ್ಲಿದ್ದ ಮೃತ ಬಾಲಕ ಪ್ರಜ್ವಲ್ ತಾಯಿ ಲಕ್ಷ್ಮಿಯು ಘಟನೆ ಬಳಿಕ ಆಗಮಿಸಿ ತನ್ನ ಮಗನ ಸಾವಿಗೆ ತನ್ನ ತಾಯಿ ಸಾವಿತ್ರಮ್ಮನೇ ಕಾರಣ ಎಂದು ದೂರನ್ನು ನೀಡಿದ್ದಾರೆ. ಕೆ.ಆರ್.ಪೇಟೆ ಪೊಲೀಸರು ಸಾವಿತ್ರಮ್ಮನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಷುರಾಮ್, ನಾಗಮಂಗಲ ಡಿವೈಎಸ್‍ಪಿ ವಿಶ್ವನಾಥ್, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಸುಧಾಕರ್, ಕಿಕ್ಕೇರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News