ಕೇಂದ್ರದಿಂದ ಚುನಾವಣಾ ಆಯೋಗ ದುರ್ಬಳಕೆ: ವಿ.ಎಸ್.ಉಗ್ರಪ್ಪ ಆರೋಪ

Update: 2019-09-24 15:57 GMT

ಹುಬ್ಬಳ್ಳಿ, ಸೆ.24: ಕೇಂದ್ರ ಸರಕಾರ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಉಪ ಚುನಾವಣೆಗಳು ನ್ಯಾಯ ಸಮ್ಮತವಾಗಿ ನಡೆಯುತ್ತವೆ ಎಂಬ ವಿಶ್ವಾಸವಿಲ್ಲ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗೆ ನ್ಯಾಯಯುತ ಹಾಗೂ ಮುಕ್ತ ಚುನಾವಣೆಯ ಅಗತ್ಯವಿಲ್ಲವಾಗಿದೆ. ಅದಕ್ಕಾಗಿ, ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವನ್ನೇ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ ಎಂದು ಆಕ್ಷೇಪಿಸಿದರು.

ಸುಪ್ರೀಂಕೋರ್ಟ್‌ನಲ್ಲಿ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸಭಾಧ್ಯಕ್ಷರು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ವಿಚಾರಣೆ ನಡೆಯುತ್ತಿದೆ. ಚುನಾವಣಾ ಆಯೋಗಕ್ಕೂ, ಇದಕ್ಕೂ ಯಾವುದೇ ಸಂಬಂಧವಿರದಿದ್ದರೂ, ಅನರ್ಹ ಅರ್ಜಿಯನ್ನು ಬೇಗನೆ ಇತ್ಯರ್ಥಗೊಳಿಸಬೇಕು ಎಂದು ಆಯೋಗ ಅರ್ಜಿ ಸಲ್ಲಿಸುತ್ತದೆ. ಹಾಗೆಯೇ ಅನರ್ಹರ ಸ್ಪರ್ಧೆಗೆ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಬೆಂಗಳೂರಿನಲ್ಲಿ ಚುನಾವಣಾ ಆಯೋಗದ ಅಧಿಕಾರಿಯು ಅನರ್ಹರು ಸ್ಪರ್ಧೆ ಮಾಡುವಂತಿಲ್ಲ ಎಂದರೆ, ಕೋರ್ಟ್‌ನಲ್ಲಿ ಆಯೋಗದ ಪರ ವಕೀಲರು ಅನರ್ಹರು ಸ್ಪರ್ಧಿಸಿದರೆ ಅಭ್ಯಂತರವಿಲ್ಲ ಎನ್ನುತ್ತಾರೆ. ಇದು ಚುನಾವಣಾ ಆಯೋಗದ ದುರ್ಬಳಕೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಮೈತ್ರಿ ಮಾಡಿಕೊಳ್ಳುವುದಿಲ್ಲ: ರಾಜ್ಯದ 15 ವಿಧಾನಸಭಾ ಚುನಾವಣೆಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿಯೂ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದು, ಮೈತ್ರಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಉಪಚುನಾವಣೆಯು ಮತದಾರರ ಸ್ವಾಭಿಮಾನ ಹಾಗೂ ಬಿಜೆಪಿಯ ಅವಕಾಶವಾದಿ ರಾಜಕಾರಣದ ನಡುವಿನ ಹೋರಾಟವಾಗಿದೆ. ಮತದಾರರು ಗೆಲುವು ಸಾಧಿಸಲಿದ್ದಾರೆ. ಪಿ.ಚಿದಂಬರಂ ಹಾಗೂ ಡಿ.ಕೆ.ಶಿವಕುಮಾರ್‌ಗೆ ಪಕ್ಷದ ಬೆಂಬಲವಿದೆ. ದ್ವೇಷದ ರಾಜಕೀಯದ ಪರಿಣಾಮ ಅವರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಧಾನಿಗೆ ಸಮಯವಿಲ್ಲ

ಅಮೆರಿಕಕ್ಕೆ ಹೋಗಿ ಅಧ್ಯಕ್ಷ ಟ್ರಂಪ್ ಪರವಾಗಿ ಚುನಾವಣೆ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿಗೆ ಸಮಯವಿದೆ. ಆದರೆ, ರಾಜ್ಯದ ಪ್ರವಾಹ ಪೀಡಿತ ಜನರ ಸಂಕಷ್ಟ ಕೇಳಲು ಸಮಯವಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾನವೀಯತೆ ತೋರುವಲ್ಲಿ ವಿಫಲವಾಗಿವೆ. ಪ್ರಧಾನಮಂತ್ರಿ ಅವರು ವೈಮಾನಿಕ ಸಮೀಕ್ಷೆ ನಡೆಸಲಿಲ್ಲ. ರಾಜ್ಯಕ್ಕೆ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ. ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ.

-ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News