ಕೆಇಎ ತರಾತುರಿಯ ಆಯ್ಕೆ ಪಟ್ಟಿ ಪ್ರಕಟಿಸಬಾರದು: ಆಕಾಂಕ್ಷಿಗಳ ಒತ್ತಾಯ

Update: 2019-09-24 16:07 GMT

ಬೆಂಗಳೂರು, ಸೆ. 24: ಪದವಿ ಶಿಕ್ಷಣ ಇಲಾಖೆಯ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್‌ಗೆ ತಪ್ಪು ವರದಿ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ತಪ್ಪುಗಳನ್ನು ಮರೆಮಾಚಿ ತರಾತುರಿಯಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ನೇಮಕಾತಿ ಆಕಾಂಕ್ಷಿಗಳು ಒತ್ತಾಯ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪನ್ಯಾಸಕ ಹುದ್ದೆಯ ಆಕಾಂಕ್ಷಿ ಅರ್ಜುನ್, ಕೆಇಎ ಅಧಿಕಾರಿಗಳು ಮಂತ್ರಿಗಳಿಗೆ ಸುಳ್ಳು ವರದಿ ನೀಡಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಮುಂದಾಗಿದೆ. ಕೆಇಎ ಸಲ್ಲಿಸಿರುವ ವರದಿಯಲ್ಲಿ ಅನೇಕ ಸುಳ್ಳುಗಳಿವೆ. ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಅಭ್ಯರ್ಥಿಗಳು ದೂರುಗಳನ್ನು ಮೇನಲ್ಲಿ ದಾಖಲಿಸಿದ್ದು, ಎಲ್ಲ ಪ್ರಕರಣಗಳನ್ನು ನ್ಯಾಯಾಲಯ ಮುಕ್ತಾಯಗೊಳಿಸಿದೆ ಎಂದು ಶಿಕ್ಷಣ ಸಚಿವರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿದರು.

ಆದರೆ, ಯಾವುದೇ ಪ್ರಕರಣಗಳು ಮುಕ್ತಾಯವಾಗಿಲ್ಲ. ಎಲ್ಲ ಪ್ರಕರಣಗಳೂ ವಿಚಾರಣೆಯ ಹಂತದಲ್ಲಿಯೇ ಇವೆ. ಈ ಸಂಬಂಧ ಕೆಇಎಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಸೂಚನೆ(ನೋಟಿಸ್)ಯನ್ನು ನೀಡಿದೆ. ಈ ಸೂಚನೆಯನ್ನು ಕೆಇಎ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ದೂರಿನ ನಂಬರ್‌ಗಳನ್ನು ಪ್ರಕಟಿಸಿದೆ. ಅದು ಈಗಲೂ ಇದೆ ಎಂದು ತಿಳಿಸಿದರು.

ಪರೀಕ್ಷೆಯ ಪ್ರತಿ ವಿಷಯಗಳ ಉತ್ತರಗಳಲ್ಲಿ ತಪ್ಪುಗಳಿದ್ದರೂ ಮಂತ್ರಿಗಳಿಗೆ ನೀಡಿರುವ ವರದಿಯಲ್ಲಿ ಮರೆಮಾಚುತ್ತಿರುವುದು ಏಕೆ? ಈ ಬಗ್ಗೆ ಹಲವು ಅನುಮಾನಗಳು ಮೂಡುತ್ತಿವೆ. ಶಿಕ್ಷಣ ಮಂತ್ರಿಗಳಿಗೆ ಕೆಇಎ ನೀಡಿರುವ ವರದಿಯನ್ನು ಬಹಿರಂಗ ಪಡಿಸಲಿ, ಸತ್ಯಾಂಶಗಳು ಹೊರ ಬರಲಿ ಎಂದು ಅಭ್ಯರ್ಥಿಗಳ ಪರವಾಗಿ ಕೇಳಿ ಕೊಳ್ಳುತ್ತಿದ್ದೇನೆ. ಅಲ್ಲದೆ, ಅಭ್ಯರ್ಥಿಗಳು ನೀಡಿರುವ ದೂರುಗಳು ಏನು? ಕೆಎಟಿನಲ್ಲಿ ದೂರುಗಳು ಯಾವ ಹಂತದಲ್ಲಿವೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿ ಕೆಇಎಗೆ ಶಿಕ್ಷಣ ಮಂತ್ರಿಗಳು ಸ್ಪಷ್ಟವಾಗಿ ಆದೇಶವನ್ನು ನೀಡಲಿ ಮಂತ್ರಿಗಳು ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಕ್ರಮ ಜರುಗಿಸಬೇಕೆಂದು ಎಂದು ಮನವಿ ಮಾಡಿದರು.

ಇನ್ನು, ಮೂರು ಬಾರಿ ಕೀ ಉತ್ತರಗಳನ್ನು ಪ್ರಕಟಿಸಿದ್ದಾರೆ. 1ನೇ ಬಾರಿ ಕೀ ಉತ್ತರ ಪ್ರಕಟಿಸಿ ಅಭ್ಯರ್ಥಿಗಳಿಂದ ಆಕ್ಷೇಪಣೆಗೆ ಅವಕಾಶ ಕಲ್ಪಿಸಿತ್ತು. ಆದರೆ ಕೀ ಉತ್ತರಗಳನ್ನು ಯಾವುದೇ ವಿಷಯ ತಜ್ಞರನ್ನು ಒಳಗೊಳ್ಳದೆ ಪ್ರಕಟಿಸಿದೆ ಎಂದು ಆರೋಪಿಸಿದರು.

ಶಿಕ್ಷಣ ಸಚಿವರೇ ನಮ್ಮ ಗೋಳು ಕೇಳಿ: ಇಡೀ ಸ್ಪರ್ಧಾತ್ಮಕ ಪರೀಕ್ಷೆಯ ಇತಿಹಾಸದಲ್ಲಿ ಯಾವುದೇ ನ್ಯಾಯಾಲಯಗಳ ಆದೇಶಗಳು ಇಲ್ಲದೆ, 3ನೇ ಬಾರಿ ಕೀ ಉತ್ತರಗಳನ್ನು ಪ್ರಕಟಿಸಿರುವುದು ಇದೇ ಮೊದಲು. ಅಲ್ಲದೆ, ಮೂರನೇ ಬಾರಿ ಕೀ ಉತ್ತರಗಳನ್ನು ಪ್ರಕಟಿಸಿಯೂ ಅನೇಕ ತಪ್ಪು ಉತ್ತರಗಳಿವೆ. ಇವುಗಳನ್ನು ಸರಿ ಪಡಿಸದೆ ಆಯ್ಕೆ ಪಟ್ಟಿ ಬಿಡಲು ಸಿದ್ಧವಾಗಿರುವುದು ದುರಂತ. ಈ ಅನ್ಯಾಯವನ್ನು ಸರಿಪಡಿಸುವವರು ಯಾರು? ಶಿಕ್ಷಣ ಸಚಿವರೇ ನಮ್ಮ ಗೋಳು ಕೇಳಿ ಎಂದು ಹುದ್ದೆಯ ಆಕಾಂಕ್ಷಿಗಳು ಅಳಲನ್ನು ತೋಡಿಕೊಂಡರು.

ಸುಪ್ರೀಂ ಕೋರ್ಟ್ ಆದೇಶ ಪಾಲಿಸಿ

ಮೀಸಲಾತಿ ಅನುಸಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹುದ್ದೆಗಳ ವರ್ಗೀಕರಣವನ್ನು ಮಾಡಿದೆ. ಆದರೆ, ಮೆರಿಟ್ ಪಟ್ಟಿಯಲ್ಲಿ ಪ್ರಥಮ ಸಾಲಿನಲ್ಲಿ ಇರುವ ಹೈ.ಕರ್ನಾಟಕ ಅಭ್ಯರ್ಥಿಗಳನ್ನು ಹೈ.ಕರ್ನಾಟಕ ಹೊರತು ಪಡಿಸಿದ ವರ್ಗಗಳಲ್ಲಿ ಮೀಸಲಾತಿಯನ್ನು ನೀಡಲಾಗಿದೆ. ಇದರಿಂದಾಗಿ ಹೈ.ಕರ್ನಾಟಕವಲ್ಲದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಅರ್ಥಶಾಸ್ತ್ರದ 100 ಉಪನ್ಯಾಸಕ ಹುದ್ದೆಗಳಲ್ಲಿ ಹೈ.ಕರ್ನಾಟಕದ ಆರು ಜಿಲ್ಲೆಯಿಂದ 82 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, 24 ಜಿಲ್ಲೆಗಳಿಂದ ಕೇವಲ 18 ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದು ಸರಿಯಾದುದಲ್ಲ. ಹೀಗಾಗಿ ಸುಪ್ರೀ ಕೋರ್ಟ್‌ನ ಆದೇಶದಂತೆ ಮೀಸಲಾತಿಗೆ ಅರ್ಹತೆ ಇರುವ ಅಭ್ಯರ್ಥಿಗೆ ಸಾಮಾನ್ಯ ವರ್ಗದಲ್ಲಿಯೇ ಕೆಲಸ ಸಿಗುವಷ್ಟು ಅಂಕಗಳು ಇದ್ದರೆ ಆ ವರ್ಗದಲ್ಲಿಯೇ ನೇಮಕಾತಿ ಮಾಡಿ ಎಂದು ಆಗ್ರಹಿಸಿದರು.

ಕೀ ಉತ್ತರಕ್ಕೆ ದೇವನೂರ ಮಹಾದೇವ ಆಕ್ಷೇಪ:

ಹೊಲೆಯರ ಚೆನ್ನ ಮತ್ತು ಕುಸುಮ ಬಾಲೆಗೆ ಇದ್ದ ಕಳ್ಳ ಸಂಬಂಧ ಹೇಗೆ ಹೊರ ಬರುತ್ತದೆ? ಎಂಬ ಪ್ರಾಧಿಕಾರದ ಪ್ರಶ್ನೆಗೆ ಉತ್ತರ (ಡಿ) ಜೋಡೆಮ್ಮರಿಂದ. ಆದರೆ ಸರಿಯಾದ ಉತ್ತರ (ಸಿ) ಮಗು ಕಪ್ಪಾಗಿದ್ದರಿಂದ, ಇದಕ್ಕೆ ಕುಸುಮ ಬಾಲೆ ಲೇಖಕ ದೇವನೂರ ಮಹಾದೇವರು ಆಕ್ಷೇಪ ವ್ಯಕ್ತಪಡಿಸಿದ್ದು, ಒಂದು ವೇಳೆ ಇದು ಮುದ್ರಣ ದೋಷವಾಗಿದ್ದಿದಲ್ಲಿ ಜೋಡೆಮ್ಮರಿಂದ ಬದಲು ಜ್ಯೋತಮ್ಮರಿಂದ ಉತ್ತರ ಸರಿಯಾಗುತ್ತಿತ್ತು. ಆಗ ಆಯೋಗ ಡಿ ಉತ್ತರವನ್ನು ಉದಾರವಾಗಿ ಪರಿಗಣಿಸಬಹುದಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯದಲ್ಲಿ ಪ್ರಕರಣ ಇದ್ದರೆ ಫಲಿತಾಂಶ ಪ್ರಕಟಿಸಬಾರದು ಎಂದೇನಿಲ್ಲ. ಫಲಿತಾಂಶಕ್ಕೆ ತಡೆಯಾಜ್ಞೆ ನೀಡಿದರೆ ಮಾತ್ರ ಏನೂ ಮಾಡುವಂತಿಲ್ಲ ಎಂಬ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೆ.ರಾಜೇಂದ್ರ ಹೇಳಿಕೆ ಅನುಮಾನ ಮೂಡಿಸುವಂತೆ ಇದೆ.

-ಅರ್ಜುನ್, ಉಪನ್ಯಾಸಕ ಹುದ್ದೆಯ ಆಕಾಂಕ್ಷಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News