ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡದಿದ್ದಲ್ಲಿ ಯುಜಿಸಿ ಅನುದಾನ ಕಡಿತಗೊಳ್ಳುವ ಸಾಧ್ಯತೆ !
ಬೆಂಗಳೂರು, ಸೆ.24: ರಾಜ್ಯಾದ್ಯಂತ ವಿಶ್ವವಿದ್ಯಾಲಯಗಳು ಖಾಲಿಯಿರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡದಿದ್ದಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ನೀಡುವ ಅನುದಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ವಿಶ್ವವಿದ್ಯಾಲಯಗಳಲ್ಲಿ ಖಾಲಿಯಿರುವ ಸಾವಿರಾರು ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡದಿದ್ದಲ್ಲಿ ಅನುದಾನ ಕಡಿತ ಮಾಡುವುದಾಗಿ ಯುಜಿಸಿ ಎಲ್ಲ ವಿವಿಗಳಿಗೂ ಎಚ್ಚರಿಕೆ ನೀಡಿದೆ.
ರಾಜ್ಯದ ವಿವಿಗಳಲ್ಲಿ ಹುದ್ದೆ ಖಾಲಿ ಉಳಿಸಿಕೊಳ್ಳುವುದರಿಂದ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂಬ ದೂರುಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಹುದ್ದೆ ಭರ್ತಿಗೆ ಟೈಮ್‌ಲೈನ್ ಮತ್ತು ಮಾರ್ಗಸೂಚಿ ಬಿಡುಗಡೆ
ಎಷ್ಟು ಹುದ್ದೆ ಖಾಲಿ?: ರಾಜ್ಯಾದ್ಯಂತ ಸರಕಾರಿ ವಿವಿಗಳಲ್ಲಿ ಸುಮಾರು ಅರ್ಧದಷ್ಟು ಬೋಧಕ ಹಾಗೂ ಬೋಧಕೇತರ ಹುದ್ದೆಗಳು ಖಾಲಿಯಿವೆ. 19 ವಿವಿಗಳಿಗೆ 3,900 ಬೋಧಕ ಹಾಗೂ 8,406 ಬೋಧಕೇತರ ಹುದ್ದೆಗಳ ಭರ್ತಿಗೆ ರಾಜ್ಯ ಸರಕಾರ ಮಂಜೂರಾತಿ ನೀಡಿದೆ. ಆದರೆ, ಕ್ರಮವಾಗಿ ಹುದ್ದೆಗಳು 2,044 ಹಾಗೂ 3,626 ಭರ್ತಿಯಾಗಿದ್ದು, ಉಳಿದವು ಖಾಲಿಯಿವೆ.
ಬೋಧಕ ವಿಭಾಗದಲ್ಲಿ ಹೆಚ್ಚು ಖಾಲಿ ಉಳಿದಿರುವ ವಿವಿಗಳ ಪೈಕಿ ಮೈಸೂರು ವಿಶ್ವವಿದ್ಯಾಲಯ (327) ಮೊದಲ ಸ್ಥಾನದಲ್ಲಿದೆ. ಉಳಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ 293, ಗುಲಬರ್ಗಾ ವಿಶ್ವವಿದ್ಯಾಲಯಗಳಲ್ಲಿ 175 ಖಾಲಿ ಹುದ್ದೆಗಳಿವೆ.
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸೂಚಿಸಿದೆ. ಆದರೆ, ರಾಜ್ಯ ಸರಕಾರದ ಅನುಮತಿ ಸಿಗಬೇಕಿದ್ದು, ಈ ನಿಟ್ಟಿನಲ್ಲಿ ನಾವು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆಯುತ್ತೇವೆ.
-ಡಾ.ಕೆ.ಆರ್.ವೇಣುಗೋಪಾಲ್, ಕುಲಪತಿ, ಬೆಂಗಳೂರು ವಿವಿ