ಸಕಲೇಶಪುರ: ಮೂರು ವರ್ಷಗಳಿಂದ ಸ್ವಂತ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ

Update: 2019-09-24 16:34 GMT

ಸಕಲೇಶಪುರ, ಸೆ.24: ತಂದೆಯೇ ತನ್ನ ಮಗಳ ಮೇಲೆ ಕಳೆದ ಮೂರು ವರ್ಷಗಳಿಂದ ನಿರಂತರ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಪಟ್ಟಣದಲ್ಲಿ ನಡೆದಿದೆ ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಕಲೇಶಪುರ ತಾಲೂಕಿನಲ್ಲಿ ಘಟನೆ ನಡೆದಿದ್ದು, ಸದ್ಯ ಬಾಲಕಿಯನ್ನು ಮಹಿಳಾ ಮಾರ್ಗದರ್ಶಿ ಅಸೋಸಿಯೇಷನ್ ಸಂಘಟನೆಯ ಅಧ್ಯಕ್ಷೆ ಕಲ್ಪನಾ ಕೀರ್ತಿ ನೇತೃತ್ವದಲ್ಲಿ ರಕ್ಷಿಸಿ, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. 

ಮಹಮ್ಮದ್ ಅಲಿ (45) ಆರೋಪಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಸ್ವಂತ ಮಗಳ ಮೇಲೆಯೇ ಅತ್ಯಾಚಾರವೆಸಗುತ್ತಿದ್ದ ಎಂದು ಆರೋಪಿಸಲಾಗಿದೆ. ಘಟನೆ ಬಗ್ಗೆ ಯಾರಿಗಾದರೂ ತಿಳಿಸಿದರೆ ಮನೆಯಿಂದ ಓಡಿಸುವುದಾಗಿ ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ ಎನ್ನಲಾಗಿದ್ದು, ಹೀಗಾಗಿ ಬಾಲಕಿ ಘಟನೆ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ಇಂದು ಬಾಲಕಿಗೆ ಹೆಚ್ಚಿನ ರಕ್ತಸ್ರಾವವಾದ ಹಿನ್ನೆಲೆ ತಾಯಿಯು ವಿಚಾರಿಸಿದ್ದು, ಈ ವೇಳೆ ಘಟನೆ ಬೆಳಕಿಗೆ ಬಂದಿದೆ.

ವಿಚಾರ ತಿಳಿದ ಮಹಿಳಾ ಸಂಘಟನೆಯು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ತಂದೆಯನ್ನು ಪೊಲೀಸರಿಗೆ ಒಪ್ಪಿಸಿ, ಬಾಲಕಿಯನ್ನು ಚಿಕಿತ್ಸೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಸಕಲೇಶಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಗೌಪ್ಯತೆ ಕಾನೂನು ಉಲ್ಲಂಘನೆ: ನಿರ್ಭಯ ಪ್ರಕರಣದ ನಂತರ ದೇಶದಲ್ಲಿ ಅತ್ಯಾಚಾರಕ್ಕೊಳಗಾದವರ ಹೆಸರು ಮತ್ತು ಪರಿಚಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಘೋರ ಅಪರಾಧವೆಂದು ಅರಿತರೂ ಆಸ್ಪತ್ರೆಯೊಳಗೆ ಕೆಲವರು ಬಾಲಕಿಯ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News