ಕೋಲಾರ: ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಮಳೆಯ ನಡುವೆಯೂ ಪ್ರತಿಭಟನೆ ನಡೆಸಿದ ಶಾಸಕಿ

Update: 2019-09-24 16:56 GMT

ಕೋಲಾರ, ಸೆ.24: ಪ್ರಭಾವಿಗಳ ಒತ್ತಡಕ್ಕೆ ಮಣಿದು ರಸ್ತೆ ನಿರ್ಮಾಣ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೋಲಾರ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಸುರಿಯುವ ಮಳೆಯಲ್ಲಿ ನಿಂತು ಪ್ರತಿಭಟಿಸಿದ ಘಟನೆ ಕೋಲಾರದಲ್ಲಿ ನಡೆಯಿತು.

ಕೋಲಾರದ ಲೋಕೋಪಯೋಗಿ ಇಲಾಖೆ ಮುಂದೆ ನೂರಾರು ಕಾರ್ಯಕರ್ತರೊಂದಿಗೆ ಅವರು ಮೌನ ಪ್ರತಿಭಟನೆ ನಡೆಸಿದರು.

"ಕೆಜಿಎಫ್ ನ ಅಶೋಕನಗರದ ರಸ್ತೆ ಅಗಲೀಕರಣ ಕಾಮಗಾರಿಗೆ ಪ್ರಭಾವಿಗಳು ಅಡ್ಡಿ ಮಾಡುತ್ತಿದ್ದಾರೆ. ಹೈಕೋರ್ಟ್ ನಲ್ಲಿ ರಸ್ತೆ ಅಭಿವೃದ್ಧಿ ಮಾಡುವಂತೆ ಆದೇಶ ಬಂದಿದೆ. ಈ ಕುರಿತು ಹಲವು ಬಾರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಜಿಲ್ಲಾಧಿಕಾರಿಯವರಿಂದ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಆದರೆ ಇಲಾಖೆಯ ಅಧಿಕಾರಿಗಳು ಮಾತ್ರ ಕಾಣದ ಕೈಗಳ ಒತ್ತಡಕ್ಕೆ ಮಣಿದು ಕಾಮಗಾರಿ ಕೈಗೊಳ್ಳಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

8 ಮಂದಿ ಕಾಮಗಾರಿಗೆ ತಡೆ ತರುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ಭಾಗದ ಸಾವಿರಾರು ಮಂದಿಗೆ ತುಂಬಾ ತೊಂದರೆ ಆಗುತ್ತಿದೆ. 8 ವರ್ಷಗಳಿಂದ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಕೇವಲ 900 ಮೀಟರ್ ರಸ್ತೆ ಕಾಮಗಾರಿಗೆ ಪ್ರಭಾವಿಗಳು ಅಡ್ಡಿ ಮಾಡುತ್ತಿದ್ದಾರೆ ಎಂದರು.

ಲೋಕೋಪಯೋಗಿ ಇಲಾಖೆಯಲ್ಲಿ ಸಂಭಂದಿಸಿದ ಅಧಿಕಾರಿಗಳು & ಗುತ್ತಿಗೆದಾರ ಉತ್ತರ ನೀಡುವವರೆಗೂ ಸ್ಥಳದಿಂದ ಹೋಗಲ್ಲ ಎಂದು ಪಟ್ಟು ಹಿಡಿದ ಶಾಸಕಿ, ಭಾರೀ ಮಳೆಯಲ್ಲೂ ಪ್ರತಿಭಟನೆ ಮುಂದುವರೆಸಿದರು. ಪೊಲೀಸರ ಮನವೊಲಿಕೆಯೂ ವಿಫಲವಾದ ಕಾರಣ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹ ಮಳೆಯಲ್ಲೇ ನಿಲ್ಲುವಂತಾಯಿತು. ಕೆಲ ಕಾಲ ಕೋಲಾರ ಮುಳಬಾಗಿಲು ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತು ವಾಹನ ಸಂಚಾರಕ್ಕೂ ತೊಂದರೆ ಆಗಿತ್ತು.

ಕೆಜಿಎಫ್ ನಗರದಲ್ಲಿರುವ ಅಶೋಕ ನಗರ ಮುಖ್ಯ ರಸ್ತೆ ಕಾಮಗಾರಿ ವಿಚಾರವಾಗಿ ರಸ್ತೆ ತಡೆಯನ್ನು ನಡೆಸಿದ ಶಾಸಕಿ ಸಂಜೆ ಆರು ಗಂಟೆಯ ವೇಳೆಗೆ ಪ್ರತಿಭಟನೆ ಮುಕ್ತಾಯಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News