ಉಪಚುನಾವಣೆಯಲ್ಲಿ ಮತಯಾಚಿಸಲು ಬಿಜೆಪಿಗೆ ಮುಖವಿಲ್ಲ: ದಿನೇಶ್‌ ಗುಂಡೂರಾವ್

Update: 2019-09-25 14:13 GMT

ಬೆಂಗಳೂರು, ಸೆ.25: ನೆರೆ ಸಂತ್ರಸ್ತರ ಬಗ್ಗೆ ರಾಜ್ಯ ಸರಕಾರಕ್ಕೆ ಕನಿಷ್ಠ ಕಾಳಜಿ ಇಲ್ಲ. 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಜನರ ಬಳಿ ಹೋಗಿ ಮತಯಾಚಿಸಲು ಇವರಿಗೆ ಮುಖ ಇಲ್ಲ. ಹೀಗಾಗಿ ಇನ್ನು 2, 3 ದಿನಗಳಲ್ಲಿ ಪರಿಹಾರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ತಿಳಿಸಿದ್ದಾರೆ. 

ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆ ಆಗದಿದ್ದಲ್ಲಿ ಯಡಿಯೂರಪ್ಪ ಕೇಂದ್ರದಿಂದ ಪರಿಹಾರ ತರುವ ಯೋಚನೆ ಮಾಡುತ್ತಲೇ ಇರಲಿಲ್ಲ. ಚುನಾವಣೆಯ ಭಯದಿಂದ ಈಗ ನರೇಂದ್ರ ಮೋದಿ ಸರಕಾರದ ಬಳಿ ನೆರೆ ಪರಿಹಾರಕ್ಕಾಗಿ ಮನವಿ ಮಾಡುತ್ತಿದ್ದಾರೆ. ಅಂದರೆ, ಜನರ ಸಮಸ್ಯೆಗಳ ನಿವಾರಣೆ ಇವರ ’ಆದ್ಯತೆ ಅಲ್ಲ’ ಎನ್ನುವುದೇ ನಿಜವಾಗಿದೆ ಎಂದು ಹೇಳಿದರು.

ನೆರೆ ಸಂತ್ರಸ್ತರಿಗೆ ಹಣ ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ಸಭೆ ಕರೆದು, 1000 ಕೋಟಿ ರೂ. ಬಿಡುಗಡೆಗೆ ಅನುಮೋದನೆ ತೆಗೆದುಕೊಂಡಿದ್ದಾರೆ. ಆದರೆ, ಇನ್ನು ಹಣ ಬಿಡಗಡೆ ಆಗಿಲ್ಲ. ಅಂದರೆ, ಒತ್ತಡದಿಂದಲೇ ಜನಸೇವೆ ಮಾಡಬೇಕೆ ಎಂದು ದಿನೇಶ್‌ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಜನರು ಸಂಕಷ್ಟದಲ್ಲಿದ್ದಾಗ ಸರಕಾರವೇ ಜನರ ಬಳಿಗೆ ಹೋಗಿ ಕೆಲಸ ಮಾಡಬೇಕಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಿ ಪರಿಹಾರಕ್ಕಾಗಿ ಒತ್ತಡ ಹೇರಬೇಕಿತ್ತು. ಇಷ್ಟು ದೊಡ್ಡ ಮಟ್ಟದ ನಷ್ಟವನ್ನು ಕೇವಲ ರಾಜ್ಯ ಸರಕಾರದಿಂದಲೇ ಭರಿಸಲು ಸಾಧ್ಯವಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕಿತ್ತು. ಗಲಾಟೆ ಮಾಡಿಯಾದರೂ ಪರಿಹಾರ ತರಬೇಕಿತ್ತು. ಅಂತಹ ಯಾವುದೇ ಕೆಲಸವನ್ನು ಯಡಿಯೂರಪ್ಪ ಸರಕಾರ ಮಾಡಲಿಲ್ಲವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿ.ಎಸ್.ಯಡಿಯೂರಪ್ಪ ರೈತ ಹೋರಾಟಗಾರರು. ಹೀಗಾಗಿ ಅವರು ರಾಜ್ಯದ ಜನರ ಸಮಸ್ಯೆಗಳನ್ನು ಬದ್ಧತೆಯಿಂದ ಪರಿಹರಿಸುವ ಬಗ್ಗೆ ನಮಗೆ ವಿಶ್ವಾಸವಿತ್ತು. ಅದಕ್ಕಾಗಿ ಅವರ ಬಗ್ಗೆ ಗೌರವ ಇತ್ತು. ಅದನ್ನು ಅವರು ಉಳಿಸಿಕೊಳ್ಳಲಿಲ್ಲವೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News