ರೋಹಿಣಿ ವರ್ಗಾವಣೆಗೆ ನನಗೂ ಸಂಬಂಧವಿಲ್ಲ: ಮುಖ್ಯ ಕಾರ್ಯದರ್ಶಿಗೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪತ್ರ

Update: 2019-09-25 14:52 GMT
ರೋಹಿಣಿ ಸಿಂಧೂರಿ

ಬೆಂಗಳೂರು, ಸೆ. 25: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೂ ತಮಗೂ ಯಾವುದೇ ಸಂಬಂಧವಿಲ್ಲ. ಈ ವಿಚಾರದಲ್ಲಿ ಅನಗತ್ಯವಾಗಿ ತಮ್ಮ ಹೆಸರನ್ನು ಥಳಕು ಹಾಕಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ. ಮಣಿವಣ್ಣನ್, ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಆಗಿದ್ದ ರೋಹಿಣಿ ಅವರನ್ನು ಸರಕಾರ ಮೂರು ದಿನಗಳ ಹಿಂದೆ ವರ್ಗಾವಣೆ ಮಾಡಿತ್ತು. ಸಿಂಧೂರಿ ಅವರು ನೆರೆ ಪರಿಹಾರಕ್ಕೆ ಹಣವನ್ನು ವರ್ಗಾಯಿಸಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿತ್ತು.

ಈ ವರ್ಗಾವಣೆ ಹಿಂದೆ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಅವರು ಇದ್ದಾರೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಮಣಿವಣ್ಣನ್ ಅವರು ಕೆಲ ಮಾಧ್ಯಮಗಳಲ್ಲಿ ಅನಗತ್ಯವಾಗಿ ತಮ್ಮ ಹೆಸರನ್ನು ಥಳಕು ಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಾರ್ಮಿಕರ ಸಹಾಯವಾಣಿ ಸಂಬಂಧ ಕಿಯೋನಿಕ್ಸ್‌ಗೆ ಟೆಂಡರ್ ನೀಡುವಂತೆ ನಾನು ಅವರ ಮೇಲೆ ಒತ್ತಡ ಹೇರಿರಲಿಲ್ಲ. ಕಾನೂನು ಪ್ರಕಾರ ಟೆಂಡರ್ ಕರೆಯುವಂತೆ ಪತ್ರ ಮೂಲಕ ಸೂಚಿಸಿದ್ದೇನೆ. ಇಷ್ಟಾದರೂ ಸಿಂಧೂರಿ ಅವರ ವರ್ಗಾವಣೆಯಲ್ಲಿ ನನ್ನ ಹೆಸರನ್ನು ಥಳಕು ಹಾಕಲಾಗಿದೆ. ಯಾವುದೇ ಅಧಿಕಾರಿಯನ್ನು ವರ್ಗಾವಣೆ ಮಾಡುವ ವಿವೇಚನೆ, ಪರಮಾಧಿಕಾರ ಸರಕಾರಕ್ಕೆ ಸೇರಿದ್ದು. ಸಿಂಧೂರಿ ಅವರನ್ನು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲೇ ಮುಂದುವರೆಸುವುದು ಸರಕಾರಕ್ಕೆ ಬಿಟ್ಟ ವಿಚಾರ. ಅವರಿಗೆ ಅಲ್ಲೇ ಮುಂದುವರೆಯಲು ಅವಕಾಶ ನೀಡಿದರೂ ತಮ್ಮದೇನು ಅಭ್ಯಂತರ ಇಲ್ಲ ಎಂದು ಮಣಿವಣ್ಣನ್ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News