ರೋಹಿಣಿ ಸಿಂಧೂರಿ ವರ್ಗಾವಣೆಗೆ ಜನವಾದಿ ಮಹಿಳಾ ಸಂಘಟನೆ ಖಂಡನೆ

Update: 2019-09-25 15:05 GMT

ಬೆಂಗಳೂರು, ಸೆ.25: ದಕ್ಷ ಮತ್ತು ಪ್ರಾಮಾಣಿಕ ಐಎಎಸ್ ಅಧಿಕಾರಿ, ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ರೋಹಿಣಿ ಸಿಂಧೂರಿಯನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿರುವ ಕ್ರಮವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.

ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಹಲವು ಕಾರ್ಮಿಕರ ಪರ ಯೋಜನೆಗಳನ್ನು ರೂಪಿಸುವ ಮೂಲಕ ಸಮರ್ಪಕವಾಗಿ ಬಳಸಲು ಹೊರಟ ರೋಹಿಣಿ ಸಿಂಧೂರಿಯವರನ್ನು ಸರಕಾರ ವರ್ಗಾವಣೆ ಮಾಡಿದೆ ಎಂದು ಸಂಘಟನೆಯ ಅಧ್ಯಕ್ಷೆ ದೇವಿ ಹಾಗೂ ಪ್ರಧಾನ ಕಾರ್ಯದರ್ಶಿ ಗೌರಮ್ಮ ಆರೋಪಿಸಿದ್ದಾರೆ.

ಈ ಕಲ್ಯಾಣ ನಿಧಿಯನ್ನು ಪ್ರವಾಹ, ನೆರೆ, ಬರ ಪರಿಹಾರಕ್ಕೆ ಬಳಸಲು ಕೊಡುವಂತೆ ಸರಕಾರದಿಂದ ಒತ್ತಡವಿತ್ತೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಜೊತೆಗೆ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಕಾರ್ಮಿಕರ ಮನೆ ಕಟ್ಟುವುದಕ್ಕಾಗಿ ಬಳಸುವುದಕ್ಕೆ ರಾಜ್ಯ ಸರಕಾರ ವಿರೋಧಿಸುತ್ತಿದೆ ಎಂದೂ ಹೇಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಆ ಮೂಲಕ ಕಲ್ಯಾಣ ಮಂಡಳಿಯ ಹಣವನ್ನು ಗುತ್ತಿಗೆದಾರರ ಪಾಲು ಮಾಡಬೇಕೆಂಬ ಸರಕಾರದ ಇರಾದೆ ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯ ಸರಕಾರದ ಈ ಪ್ರಯತ್ನವು, ಕಟ್ಟಡ ಕಾರ್ಮಿಕರ ಕಲ್ಯಾಣ ಯೋಜನೆಗಳ ಭಾಗವಾಗಿ ಸೆಸ್ ಮೂಲಕ ಸಂಗ್ರಹಿಸಿದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸದಂತೆ ಸುಪ್ರೀಂಕೋರ್ಟ್ ನೀಡಿದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.

ರೋಹಿಣಿ ಕಾನೂನಿನ ಪ್ರಕಾರ ಕಾರ್ಮಿಕರ ಪರವಾಗಿ ಕಾರ್ಯಪ್ರವೃತ್ತರಾಗಿರುವುದು ಬಿಜೆಪಿ ಸರಕಾರಕ್ಕೆ ಮಗ್ಗಲ ಮುಳ್ಳಾಗಿದೆ. ಕೇಂದ್ರ ಸರಕಾರದಿಂದ ರಾಜ್ಯಕ್ಕೆ ತರಬೇಕಾದ ನೆರೆ, ಬರ, ಪ್ರವಾಹ ಪರಿಹಾರದ ಹಣವನ್ನು ತರಲು ವಿಫಲವಾದ ರಾಜ್ಯ ಸರಕಾರ ಬಡ ಕಾರ್ಮಿಕ ಮಕ್ಕಳ ಬದುಕಿಗೆ ಬರೆ ಹಾಕಲು ಹೊರಟಿದೆ ಎಂದು ಅವರು ದೂರಿದ್ದಾರೆ. ರೋಹಿಣಿಯ ಕಾರ್ಮಿಕ ಪರ ಧೋರಣೆಯನ್ನ ಬೆಂಬಲಿಸುತ್ತ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ ಲೂಟಿಕೋರ ನೀತಿಯನ್ನು, ರಾಜ್ಯದ ಬಗ್ಗೆ ನಿರ್ಲಕ್ಷ ತೋರುತ್ತಿರುವ ಕೇಂದ್ರ ಸರಕಾರವನ್ನು ರಕ್ಷಿಸಲು ಹೊರಟಿರುವ ರಾಜ್ಯ ಸರಕಾರವನ್ನು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ. ಅಲ್ಲದೇ, ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿಯ ವರ್ಗಾವಣೆಯನ್ನು ಕೈಬಿಡಬೇಕೆಂದು ಅವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News