ದಲಿತ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗಳೊಂದಿಗೆ ಪೊಲೀಸರು ಶಾಮೀಲು; ಆರೋಪ

Update: 2019-09-25 17:09 GMT

ದಾವಣಗೆರೆ, ಸೆ.25: ವಿಜಯಪುರದಲ್ಲಿ ವಿದ್ಯಾರ್ಥಿನಿಯ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣದಲ್ಲಿ ಪೊಲೀಸರು ಆರೋಪಿಗಳೊಂದಿಗೆ ಶಾಮೀಲಾಗಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಕುಂದುವಾಡ ಮಂಜುನಾಥ ಗಂಭೀರ ಆರೋಪ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ದಲಿತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ, ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ನಗರದಲ್ಲಿ ಹಳೆಯ ಟೈಯರ್‌ಗಳನ್ನು ಸುಟ್ಟು ಹಾಕಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮೃತ ವಿದ್ಯಾರ್ಥಿನಿಯ ತಾಯಿ ಕಲಕೇರಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸ್ ಸಿಬ್ಬಂದಿ ಅಸಂಗಿ, ವೀರಭದ್ರ ಬಿರಾದಾರ ಹಾಗೂ ಪಿಎಸ್‌ಐ ಪ್ರಕರಣ ದಾಖಲಿಸಲು ನಿರಾಕರಿಸಿದ್ದರು ಎಂದು ಆರೋಪಿಸಿದರು.

ಘಟನೆ ನಡೆದು 15 ದಿನ ನಂತರ ಸಿಂಧಗಿಯ ವೃತ್ತ ನಿರೀಕ್ಷಕ, ಕಲಕೇರಿ ಸಬ್ ಇನ್‌ಸ್ಪೆಕ್ಟರ್‌ಗೆ ಮೃತದೇಹವನ್ನು ಪತ್ತೆಹಚ್ಚಿದ್ದರೂ, ಕುಟುಂಬಿಕರಿಗೆ ವಿಷಯ ತಿಳಿಸದೆ, ಪೊಲೀಸರೇ ಕಾನೂನು ಬಾಹಿರವಾಗಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಆರೋಪಿಗಳೆಂದು ಶಂಕಿಸಲಾಗಿರುವ ಮಡಿಬಾಳಪ್ಪಬಡಿಗೇರ್ ಹಾಗೂ ಆರು ಜನ ಸಹೋದರರು ಸಿಂಧಗಿಯ ವೃತ್ತ ನಿರೀಕ್ಷಕ, ಕಲಕೇರಿ ಸಬ್ ಇನ್‌ಸ್ಪೆಕ್ಟರ್ ಅವರ ಎದುರೇ ರಾಜಾರೋಷವಾಗಿ ಅಡ್ಡಾಡಿದರೂ ಬಂಧಿಸದೇ ಇರುವುದು ಪೊಲೀಸ್ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆಯೇ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ಅವರು ದೂರಿದರು.

ತಕ್ಷಣವೇ ಮಡಿಬಾಳಪ್ಪಬಡಿಗೇರ ಹಾಗೂ ಆತನ ಆರು ಜನ ಸಹೋದರರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ, ತನಿಖೆಗೊಳಪಡಿಸಬೇಕು. ಪ್ರಕರಣ ದಾಖಲಿಸಿಕೊಳ್ಳದೆ, ಆರೋಪಿಗಳ ರಕ್ಷಣೆಗೆ ನಿಂತ ಸಿಂಧಗಿಯ ವೃತ್ತ ನಿರೀಕ್ಷಕ, ಕಲಕೇರಿ ಸಬ್ ಇನ್‌ಸ್ಪೆಕ್ಟರ್ ವಿರುದ್ಧವೂ ಕ್ರಮ ಜರುಗಿಸಬೇಕು. ಈ ಇಬ್ಬರೂ ಅಧಿಕಾರಿಗಳನ್ನು ಸೇವೆಯಿಂದಲೇ ವಜಾ ಮಾಡಬೇಕು. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ವಿದ್ಯಾರ್ಥಿನಿಯ ಕುಟುಂಬಕ್ಕೆ ತಕ್ಷಣ 10 ಎಕರೆ ಜಮೀನು, 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.

ಮೃತ ಯುವತಿಯ ಕುಟುಂಬದ ಸದಸ್ಯರ ಪೈಕಿ ಒಬ್ಬರಿಗೆ ಸರಕಾರಿ ನೌಕರಿ ನೀಡಬೇಕು. ಕುಟುಂಬದ ವಯಸ್ಸಾದವರಿಗೆ 10 ಸಾವಿರ ರೂ. ಮಾಸಿಕ ವೇತನ ನೀಡಬೇಕು. ಈ ಬಗ್ಗೆ ರಾಜ್ಯ ಸರಕಾರ ಯಾವುದೇ ರೀತಿಯಲ್ಲೂ ಉದಾಸೀನ ಮಾಡದೇ, ತಕ್ಷಣವೇ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಬೇಕು. ಉನ್ನತ ಮಟ್ಟದ ಅಧಿಕಾರಿಗಳಿಂದ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉಪ ವಿಭಾಗಾಧಿಕಾರಿ ಮೂಲಕ ಕೇಂದ್ರ, ರಾಜ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಸಂಘಟನೆ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ, ಮಹಿಳಾ ಸಂಚಾಲಕಿ ವಿಜಯಲಕ್ಷ್ಮಿ, ಕೋಗಲೂರು ಕುಮಾರ ಇತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು, ಕಾರ್ಯಕರ್ತರು ಎಸಿ ಕಚೇರಿ ಬಳಿ ಹಳೆ ಪಿ.ಬಿ.ರಸ್ತೆಯಲ್ಲಿ ಹಳೆಯ ಟೈಯರ್ ಸುಡುವ ಮೂಲಕ ವಿಜಯಪುರದ ಅತ್ಯಾಚಾರಿ, ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಸಂಘಟನೆಯ ಸತ್ಯಪ್ಪ, ಜಿಗಳಿ ಹಾಲೇಶ, ನಾಗರಾಜ ನಿಟುವಳ್ಳಿ, ನಿಟ್ಟೂರು ಕೃಷ್ಣಪ್ಪ, ಖಾಲಿದ್ ಅಲಿ, ಪರಮೇಶ ಪುರದಾಳ್, ಸಿದ್ದಪ್ಪ ಬಾತಿ, ಮಹಾಂತೇಶ ಹಾಲುವರ್ತಿ, ಹನುಮಂತಪ್ಪ ಜಾಲಿಹಾಳ್, ಪಿ.ಪ್ರದೀಪ, ಹನುಮಂತಪ್ಪಅಣಜಿ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News