ಮೈಸೂರು ದಸರಾಗೂ ತಟ್ಟಿದ ನೀತಿ ಸಂಹಿತೆ ಬಿಸಿ: ಜನಪ್ರತಿನಿಧಿಗಳು ಭಾಗವಹಿಸದಂತೆ ಚುನಾವಣಾ ಆಯುಕ್ತರ ಸೂಚನೆ
ಮೈಸೂರು,ಸೆ.25: ವಿಶ್ವವಿಖ್ಯಾತ ಮೈಸೂರು ದಸರಾಗೆ ಚುನಾವಣಾ ನೀತಿ ಸಂಹಿತೆಯ ಬಿಸಿ ತಟ್ಟಿದ್ದು, ದಸರಾ ಸಮಾರಂಭಗಳ ಯಾವ ಕಾರ್ಯಕ್ರಮಗಳಿಗೂ ಜನಪ್ರತಿನಿಧಿಗಳು ಭಾಗವಹಿಸದಂತೆ ರಾಜ್ಯ ಚುನಾವಣಾ ಆಯುಕ್ತರು ಸೂಚನೆ ನೀಡಿದ್ದಾರೆ.
ಉಪಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಮೈಸೂರು ಜಿಲ್ಲೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಜಿಲ್ಲೆಯ ಹುಣಸೂರು ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಹಾಗಾಗಿ ಚುನಾವಣಾ ನೀತಿ ಸಂಹಿತೆ ಇದ್ದು, ದಸರಾ ಸಮಾರಂಭದಲ್ಲಿ ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸುವಂತಿಲ್ಲ.
ಈ ಸಂಬಂಧ ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಜಿಲ್ಲಾಧಿಕಾರಿಗಳಿಗೆ ಜನಪ್ರತಿನಿಧಿಗಳು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದರು. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ರಾಜ್ಯ ಚುನಾವಣಾ ಆಯುಕ್ತರು ಇಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರೊಂದಿಗೆ ವೀಡೀಯೋ ಕಾನ್ಫರೆನ್ಸ್ ಮೂಲಕ ಕಟ್ಟು ನಿಟ್ಟಾಗಿ ಚುನಾವಣಾ ನೀತಿ ಸಂಹಿತೆ ಪಾಲಿಸುವಂತೆ ಸೂಚಿಸಿದ್ದಾರೆ.
ಇಂದು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿದ್ದ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಎಲ್ಲಾ ಕಾರ್ಯಕ್ರಮಗಳಿಂದೂ ದೂರ ಉಳಿದಿದ್ದಾರೆ.