ವಿರಾಜಪೇಟೆ ಅರಣ್ಯಾಧಿಕಾರಿ ಹತ್ಯೆ: 23 ವರ್ಷಗಳ ನಂತರ ಆರೋಪಿಯ ಬಂಧನ !
ಮಡಿಕೇರಿ, ಸೆ.25: ವಿರಾಜಪೇಟೆ ತಾಲೂಕಿನ ಮಾಕುಟ್ಟ ಅರಣ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯ ಅಧಿಕಾರಿಯೋರ್ವರನ್ನು ಗುಂಡು ಹೊಡೆದು ಕೊಲೆಗೈದು, ಕಳೆದ 23 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ 2ನೇ ಆರೋಪಿಯನ್ನು ಬಂಧಿಸುವಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇರಳ ರಾಜ್ಯದ ಪಾಣತ್ತಿಲ್ ನಿವಾಸಿ ಜಾರ್ಜ್ ಕುಟ್ಟಿ(54) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಇದೀಗ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಕಳೆದ 23 ವರ್ಷದ ಹಿಂದೆ ಅಂದರೆ 1997ರಲ್ಲಿ ಮಾಕುಟ್ಟದಲ್ಲಿ ಅರಣ್ಯ ಅಧಿಕಾರಿಯಾಗಿದ್ದ ಪೊನ್ನಪ್ಪ ಎಂಬವರನ್ನು ಐವರ ಬೇಟೆಗಾರರ ತಂಡ ಗುಂಡಿಕ್ಕಿ ಕೊಲೆ ಮಾಡಿತ್ತು. ಅಂದು ಪೊಲೀಸರು ಆರೋಪಿಗಳ ವಿರುದ್ದ ಐಪಿಸಿ 302, 201 ರೆಡ್/ವಿತ್34, ಐಪಿಸಿ 3 ಮತ್ತು 25, ಇಂಡಿಯನ್ ಆರ್ಮ್ಸ್ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ಕೇರಳದ ಪಾಣತ್ತಿಲ್ ನಿವಾಸಿ ಜಾರ್ಜ್ ಕುಟ್ಟಿ ಘಟನೆ ನಡೆದ ದಿನದಿಂದ ತಲೆ ಮರೆಸಿಕೊಂಡು ಪರಾರಿಯಾಗಿದ್ದ.
ಆರೋಪಿ ಕೇರಳದ ಪಾಣತ್ತಿಲ್ ಊರಿನಲ್ಲಿ ತಲೆ ಮರೆಸಿಕೊಂಡಿರುವ ಮಾಹಿತಿ ಕಲೆ ಹಾಕಿದ ವಿರಾಜಪೇಟೆ ಅಪರಾಧ ವಿಭಾಗದ ಮುಖ್ಯಪೇದೆ ಶ್ರೀನಿವಾಸ್ ಮತ್ತು ಎಂ.ಚಂದ್ರಶೇಖರ್ ಎಂಬವರು, ಈ ಕುರಿತು ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ತಕ್ಷಣವೇ ಕಾರ್ಯ ಪ್ರವೃತ್ತರಾದ ವಿರಾಜಪೇಟೆ ಪೊಲೀಸರು ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ ನಿರ್ದೇಶನದಂತೆ ವಿರಾಜಪೇಟೆ ಉಪ ಅಧೀಕ್ಷಕ ಮತ್ತು ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗೆ ಒಂದು ತಂಡ ರಚಿಸಿದ್ದರು.
ಅದರಂತೆ ಪೊಲೀಸರ ತಂಡ ಇಂದು ಬೆಳಗಿನ 5 ಗಂಟೆಗೆ ಆರೋಪಿ ಜಾರ್ಜ್‍ಕುಟ್ಟಿ ತಲೆ ಮರೆಸಿಕೊಂಡಿದ್ದ ಕೇರಳದ ಪಾಣತ್ತಿಲ್ ಕಡವು ಎಂಬಲ್ಲಿಗೆ ತೆರಳಿ ಆತನನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಆರೋಪಿ ಜಾರ್ಜ್‍ನನ್ನು ವಿಚಾರಣೆ ನಡೆಸಿ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ವೀಣಾ ನಾಯಕ್, ಎಎಸ್ ಐ ಶ್ರೀಧರ್, ಸಿಬ್ಬಂದಿಗಳಾದ ಬಿ.ಎಂ. ರಾಮಪ್ಪ, ಎಂ.ಆರ್. ರವಿಕುಮಾರ್, ಟಿ.ಎಸ್.ಸತೀಶ್, ಎಂ.ಎಂ. ಕುಶಾಲಪ್ಪ, ಬಿ.ಎಂ. ಉತ್ತಪ್ಪ, ಅಪರಾಧ ಪತ್ತೆ ದಳದ ಹೆಚ್.ಎಸ್. ಶ್ರೀನಿವಾಸ್, ಎಂ. ಚಂದ್ರಶೇಖರ್ ಪಾಲ್ಗೊಂಡಿದ್ದರು.
ಎಸ್‍ಪಿ ಸುಮನ್ ಅವರು ಕಾರ್ಯಾಚರಣೆಯ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.