ಉಯಿಘರ್ ಮುಸ್ಲಿಮರ ಅಂಗಗಳನ್ನು ಬಲವಂತವಾಗಿ ಕಸಿ ಮಾಡುತ್ತಿರುವ ಚೀನಾ ಸರಕಾರ: ಆರೋಪ

Update: 2019-09-26 08:22 GMT

ಜಿನೇವಾ: ಚೀನಾದಲ್ಲಿ ಉಯಿಘರ್ ಮುಸ್ಲಿಮರು ಸೇರಿದಂತೆ ದೌರ್ಜನ್ಯಕ್ಕೊಳಗಾಗಿ ದಿಗ್ಬಂಧನದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಜನರ ಅಂಗಗಳನ್ನು ವ್ಯಾಪಕವಾಗಿ ಕಸಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಅಲ್ಲಿನ ಚೀನಾ ಟ್ರಿಬ್ಯೂನಲ್ ಎಂಬ ಹಕ್ಕು ಸಂಸ್ಥೆ ಇಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಸಭೆಯಲ್ಲಿ ಮಾಡಿದೆ.

ಚೀನಾದ ಸರಕಾರವು ಉಯಿಘರ್ ಮುಸ್ಲಿಮರು ಸಹಿತ ಫಲುನ್ ಗೋಂಗ್ ಧಾರ್ಮಿಕ ಪಂಗಡದ ಸದಸ್ಯರ ಪ್ರಮುಖ ಅಂಗಗಳಾದ ಹೃದಯ, ಕಿಡ್ನಿ, ಶ್ವಾಸಕೋಶ ಹಾಗೂ ಚರ್ಮವನ್ನು ಕಸಿ ಮಾಡುತ್ತಿದೆ ಎಂದು ಅಂಗ ಕಸಿ ಅಭಿಯಾನ ಜಾಗೃತಿಯಲ್ಲಿ ತೊಡಗಿರುವ ಈ ಸಂಘಟನೆ ಹೇಳಿದೆ.

ವಕೀಲರು, ಶಿಕ್ಷಣ ತಜ್ಞರು ಹಾಗೂ ವೈದ್ಯಕೀಯ ವೃತ್ತಿಪರರು ಇರುವ ಈ ಸಂಘಟನೆಗೆ ಆಸ್ಟ್ರೇಲಿಯಾದ ಎನ್‍ಜಿಒ ಎಂಡ್ ಟ್ರಾನ್ಸ್‍ಪ್ಲಾಂಟ್ ಅಬ್ಯೂಸ್ ಇನ್ ಚೈನಾ ಬೆಂಬಲ ನೀಡುತ್ತಿದೆ.

ಚೀನಾದಲ್ಲಿ ದಿಗ್ಬಂಧನದಲ್ಲಿರುವ ಕೆಲ ಗುಂಪುಗಳ ಜನರ ಅಂಗ ಕಸಿಯನ್ನು ಬಲವಂತವಾಗಿ ಮಾಡಲಾಗುತ್ತಿದೆ ಎಂಬುದಕ್ಕೆ ತನ್ನ ಬಳಿ ಸಾಕ್ಷ್ಯವಿದೆ ಎಂದು ಸಂಘಟನೆಯ ವಕೀಲ ಹಮೀದ್ ಸಾಬಿ ಹೇಳಿದ್ದಾರೆ. ಚೀನಾ ಮಾನವತೆಯ ವಿರುದ್ಧ ಅಪರಾಧವೆಸಗುತ್ತಿದೆ ಎಂದೂ ಅವರು ಆರೋಪಿಸಿದರು.

ಜೂನ್ ತಿಂಗಳಲ್ಲಿ ಪ್ರಕಟಗೊಂಡ ಚೀನಾ ಟ್ರಿಬ್ಯುನಲ್ ನ ಅಂತಿಮ ವರದಿಯನ್ನು ಉಲ್ಲೇಖಿಸಿದ ಸಬಿ, ಚೀನಾ ಸರಕಾರದ ಆದೇಶದಂತೆ ಫಲುನ್ ಗೋಂಗ್ ಪಂಗಡದ ಹಲವು ಸದಸ್ಯರನ್ನು ಕೊಲ್ಲಲಾಗಿದೆ, ಜೀವಂತವಿರುವಾಗಲೇ ಅವರ ದೇಹ ಕುಯ್ದು ಪ್ರಮುಖ ಅಂಗಗಳನ್ನು ತೆಗೆದು ಮಾರಾಟ ಮಡಿದೆ ಎಂದು ವರದಿ ಹೇಳಿದೆ ಎಂದಿದ್ದಾರೆ.

ಚೀನಾದ ಆಸ್ಪತ್ರೆಗಳಲ್ಲಿ ಅಂಗಕಸಿಗಾಗಿ ಹೆಚ್ಚು ಕಾಲ ಕಾಯುವ ಅಗತ್ಯವಿಲ್ಲದೇ ಇರುವುದು ಕೂಡ ಇದಕ್ಕೆ ಪುಷ್ಠಿ ನೀಡಿದೆ ಎಂದು ಅವರು ಹೇಳಿದರು.

ಟ್ರಿಬ್ಯುನಲ್ ನ ವರದಿಯನ್ನು ಬ್ರಿಟಿಷ್ ವಕೀಲ ಸರ್ ಜೆಫ್ರಿ ನೈಸ್ ಅವರ ನೇತೃತ್ವದಲ್ಲಿ ಸಿದ್ಧಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News