ಕೊಳ್ಳೇಗಾಲ: ಕಬಿನಿ ಕಾಲುವೆ ಒಡೆದು ಜಲಾವೃತಗೊಂಡ ಗ್ರಾಮಕ್ಕೆ ಶಾಸಕ ಆರ್.ನರೇಂದ್ರ ಭೇಟಿ

Update: 2019-09-26 13:03 GMT

ಕೊಳ್ಳೇಗಾಲ, ಸೆ.26: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ಕಬಿನಿ ಕಾಲುವೆ ಒಡೆದು ಜಲಾವೃತಗೊಂಡಿದ್ದ ಹೊಂಡರಬಾಳು ಗ್ರಾಮಕ್ಕೆ ಹನೂರು ಶಾಸಕ ಆರ್.ನರೇಂದ್ರ ಭೇಟಿ ನೀಡಿದರು. 

ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ಜಲಾವೃತಗೊಂಡ ನೂರಾರು ಎಕರೆ ಜಮೀನುಗಳು ಹಾಗೂ ಮನೆಗಳನ್ನು ವೀಕ್ಷಿಸಿ, ರೈತರಿಗೆ ಸಾಂತ್ವನ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಕಬಿನಿ ನಾಲೆಗಳಲ್ಲಿ ಹೂಳು ತೆಗೆಯದೆ ಈ ಅನಾಹುತವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಅನಾಹುತ ಆಗದಂತೆ ತಡೆಗಟ್ಟಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು. ಈಗ ಉಂಟಾಗಿರುವ ನಷ್ಟಕ್ಕೆ ಪರಿಹಾರ ನಿಧಿಯಿಂದ ಹಣ ಬಿಡುಗಡೆ ಮಾಡಲು ತಹಶೀಲ್ದಾರ್ ರವರಿಗೆ ತಿಳಿಸುವುದಾಗಿ ಪತ್ರಕರ್ತರಿಗೆ ಮಾಹಿತಿ ನೀಡಿದರು. 

ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಏನು ಕ್ರಮಕೈಗೊಳ್ಳುವಿರಿ ಎಂಬ ಪ್ರಶ್ನೆಗೆ, ಸರ್ಕಾರದ ಗಮನಕ್ಕೆ ತಂದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ಮಧುವನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಯಶೋಧ, ತಹಶೀಲ್ದಾರ್ ಕುನಾಲ್ ನೀರಾವರಿ ಇಲಾಖೆಯ ಪ್ರಶಾಂತ್, ನಟೇಶ್, ಪಿಎಸ್‍ಐ ಅಶೋಕ್, ಗ್ರಾಮದ ಮುಖಂಡ ಮತೀನ್, ಬಸವಣ್ಣ, ಸೋಮಾರಾಧ್ಯ, ರಾಜು, ಸಿದ್ದರಾಜು, ಶಿವಕುಮಾರ್, ಮಹದೇಶ್ವರ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News