ಅನರ್ಹರಿಗೆ ಅನ್ಯಾಯ ಆಗುವುದಿಲ್ಲ: ಸಚಿವ ಕೆ.ಎಸ್.ಈಶ್ವರಪ್ಪ

Update: 2019-09-26 14:07 GMT

ಹುಬ್ಬಳ್ಳಿ, ಸೆ. 26: ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ತೀರ್ಮಾನ ಸ್ವಾಗತಾರ್ಹ. ಕರ್ನಾಟಕ ರಾಜ್ಯದ ಬೆಳವಣಿಗೆಗಳನ್ನು ದೇಶವೇ ಎದುರು ನೋಡುತ್ತಿದೆ. ಅನರ್ಹ ಶಾಸಕರಿಗೆ ಎಂದೂ ಅನ್ಯಾಯ ಆಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರ ಆದೇಶಕ್ಕೆ ಹಿನ್ನಡೆಯಾಗಿದ್ದು, ಕೋರ್ಟ್ ತೀರ್ಮಾನದಿಂದ ರಮೇಶ್‌ ಕುಮಾರ್ ಅವರಿಗೆ ಭ್ರಮನಿರಸನವಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಿಂದ ಹೊರ ಬಂದಿರುವ ಶಾಸಕರು ಕೈಗೊಂಡ ತೀರ್ಮಾನ ಸರಿಯಾಗಿದೆ. ಆ ಶಾಸಕರಿಗೆ ಸಿಗಬೇಕಾದ ಸ್ಥಾನಮಾನವನ್ನ ನೀಡಲಿದ್ದೇವೆ. ಅವರೂ ನಮ್ಮ ಶಾಸಕರೇ. ಅವರಿಗೆ ಸ್ಥಾನಮಾನ ನೀಡುವುದು ನಮ್ಮ ಕರ್ತವ್ಯ ಎಂದು ಈಶ್ವರಪ್ಪ ಹೇಳಿದರು.

ಅನರ್ಹ ಶಾಸಕರ ಸಾಂವಿಧಾನಿಕ ಬಿಕ್ಕಟ್ಟುಗಳನ್ನ ಕೋರ್ಟ್ ಇತ್ಯರ್ಥ ಪಡಿಸಲಿದೆ. ಸುಪ್ರೀಂ ಕೋರ್ಟ್‌ನ ಆದೇಶವೇ ಅಂತಿಮ. ಅದಕ್ಕೆ ಎಲ್ಲರೂ ತಲೆಬಾಗಲೇಬೇಕು ಎಂದ ಈಶ್ವರಪ್ಪ, ಸಿದ್ದರಾಮಯ್ಯನವರ ಪರ ಮಾತನಾಡಿದರೆ ಸ್ಥಾನ ಸಿಗಲಿದೆ ಎಂಬ ಭ್ರಮೆಯಲ್ಲಿ ರಮೇಶ್‌ ಕುಮಾರ್ ಅವರು ಇದ್ದಾರೆ ಎಂದು ಟೀಕಿಸಿದರು.

ಮಾಜಿ ಸ್ಪೀಕರ್ ರಮೇಶ್‌ ಕುಮಾರ್, ಸಿದ್ಧರಾಮಯ್ಯ ಅವರ ಪರ ಮಾತನಾಡಿದರೆ ಅವರಿಗೆ ಉತ್ತಮ ಸ್ಥಾನ ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವರ್ಚಸ್ಸು ಕುಗ್ಗುತ್ತಿದೆ ಎಂದು ಈಶ್ವರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News