×
Ad

ಮಹಿಷ ದಸರಾಗೆ ಸಂಸದ ಪ್ರತಾಪ್ ಸಿಂಹ ಕಿಡಿ: ಸಾರ್ವಜನಿಕರ ಎದುರೇ ಡಿಸಿಪಿಗೆ ತರಾಟೆ

Update: 2019-09-26 21:49 IST
ಪ್ರತಾಪ್ ಸಿಂಹ- ಜ್ಞಾನಪ್ರಕಾಶ್ ಸ್ವಾಮೀಜಿ

ಮೈಸೂರು,ಸೆ.26: ಮೂಲ ನಿವಾಸಿಗಳ ಹಬ್ಬ ಮಹಿಷ ದಸರಾ ಆಚರಣೆಗೆ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದು, ಇವರಿಗೆ ಅನುಮತಿ ನೀಡಿದವರು ಯಾರು ಎಂದು ಸಾರ್ವಜನಿಕರ ಮಧ್ಯೆಯೇ ಡಿಸಿಪಿ ಮುತ್ತುರಾಜ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸೆ.27ರ ಶುಕ್ರವಾರ ಚಾಮುಂಡಿ ಬೆಟ್ಟದ ಮಹಿಷ ಪ್ರತಿಮೆ ಬಳಿ ಮೂಲನಿವಾಸಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು ಸೇರಿದಂತೆ ಅನೇಕ ಸಂಘಸಂಸ್ಥೆಗಳೊಡಗೂಡಿ ಮಹಿಷ ದಸರಾ ಆಚರಣೆಗೆ ವೇದಿಕೆ ಸಿದ್ಧಗೊಳಿಸಲಾಗುತ್ತಿತ್ತು.

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಜೊತೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ ದಸರಾ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸುತ್ತಿದ್ದರು. ಆಗ ವೇದಿಕೆ ಮಹಿಷ ದಸರಾ ಆಚರಣೆಗೆ ವೇದಿಕೆ ಸಿದ್ದಗೊಳ್ಳುತ್ತಿದ್ದುದನ್ನು ಕಂಡ ಅವರು ಕೆಂಡಾಮಂಡಲರಾದರು. ತಕ್ಷಣ ಸ್ಥಳದಲ್ಲೇ ಇದ್ದ ಡಿಸಿಪಿ ಅವರನ್ನು ಕರೆದು 'ಯಾರು ಇವರಿಗೆ ಅನುಮತಿ ನೀಡಿದ್ದು, ಹೇಗೆ ಮಾಡುತ್ತಿದ್ದಾರೆ. ಕೂಡಲೇ ಇದನ್ನು ತೆರವುಗೊಳಸಿ' ಎಂದು ತರಾಟೆಗೆ ತೆಗೆದುಕೊಂಡರು.

ತಕ್ಷಣ ಅಧಿಕಾರಿಗಳು ವೇದಿಕೆ ತೆರವುಗೊಳಿಸುವಂತೆ ಅಲ್ಲಿದ್ದವರಿಗೆ ಸೂಚಿಸಿ ತೆರವುಗೊಳಿಸಿದರು.

"ಯಾರೇ ತಡೆದರೂ ಮಹಿಷ ದಸರಾ ಆಚರಣೆ ಮಾಡಿಯೇ ಮಾಡುತ್ತೇವೆ"

"ಇದು ಮೂಲನಿವಾಸಿಗಳ ಹಬ್ಬ, ಸಂವಿಧಾನದ ಅಡಿಯಲ್ಲೇ ನಮ್ಮ ಹಕ್ಕನ್ನು ಪ್ರತಿಪಾದಿಸಲು ಮುಂದಾಗಿದ್ದೇವೆ. ಯಾರೇ ತಡೆದರೂ ನಮ್ಮ ಸಾಂಸ್ಕೃತಿಕ ಹಬ್ಬ ಮಹಿಷ ದಸರಾವನ್ನು ಆಚರಣೆ ಮಾಡಿಯೇ ತೀರುತ್ತೇವೆ ಎಂದು ಪ್ರಗತಿಪರ ಸ್ವಾಮೀಜಿ ಹಾಗೂ ಮಹಿಷಾ ದಸರಾ ಆಚರಣೆ ಸಮಿತಿಯ ಮುಖ್ಯಸ್ಥ ಜ್ಞಾನಪ್ರಕಾಶ್ ಸ್ವಾಮೀಜಿ ತಿಳಿಸಿದ್ದಾರೆ.

ಮಹಿಷ ದಸರಾ ಆಚರಣೆ ಸಂಬಂಧ ಸಂಸದ ಪ್ರತಾಪ್ ಸಿಂಹ ತೆರವುಗೊಳಿಸುವಂತೆ ಸೂಚಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಜ್ಞಾನಪ್ರಕಾಶ್ ಸ್ವಾಮೀಜಿ, ನಾವು ಸಂವಿಧಾನದ ಅಡಿಯಲ್ಲೇ ಮಹಿಷ ದಸರ ಆಚರಣೆಗೆ ಮುಂದಾಗಿದ್ದೇವೆ. ನಾವು ಯಾರ ವಿರುದ್ಧವೂ ಈ ಹಬ್ಬವನ್ನು ಆಚರಿಸುತ್ತಿಲ್ಲ. ನಮ್ಮ ಹಕ್ಕನ್ನು ಪ್ರತಿಪಾದಿಸುತ್ತಿದ್ದೇವೆ ಅಷ್ಟೆ. ಈ ದೇಶದಲ್ಲಿ ಯಾರು ಯಾವ ಹಬ್ಬವನ್ನು ಬೇಕಾದರು ಆಚರಿಸಬಹುದು, ಧಾರ್ಮಿಕ ಹಕ್ಕನ್ನು ಮೊಟಕುಗೊಳಿಸಲು ಯಾರಿಗೂ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಕಾನೂನಾತ್ಮಕವಾಗಿ ಮಹಿಷ ದಸರಾ ಆಚರಣೆಗೆ ಅನುಮತಿಗಾಗಿ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಚಾಮುಂಡಿ ಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಮಾಡಿದ್ದೇವೆ. ಅವರು ನಮಗೆ ಅನುಮತಿ ನೀಡಬೇಕಿತ್ತು. ಆದರೆ ಇದುವರೆಗೂ ಅವರು ಲಿಖಿತವಾಗಿ ಅನುಮತಿ ನೀಡಿಲ್ಲ, ನಾವು ಕಾನೂನು ಮೀರಿ ಹೋಗುವುದಿಲ್ಲ, ಕಾನೂನು ಚೌಕಟ್ಟಿನಲ್ಲಿಯೇ ನಮ್ಮ ಹಬ್ಬವನ್ನು ಆಚರಿಸುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News