ಮೈಸೂರು ದಸರಾ ಉತ್ಸವ: ಕಾಮಗಾರಿ ಕೈಗೊಳ್ಳಲು 10 ಕೋಟಿ ರೂ.ಬಿಡುಗಡೆ
ಬೆಂಗಳೂರು, ಸೆ. 26: ನಾಡಹಬ್ಬ ಮೈಸೂರು ದಸರಾ ಉತ್ಸವದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ದಸರಾ ಉತ್ಸವದ ಅಂಗವಾಗಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕೂಡಲೇ 15 ಕೋಟಿ ರೂ. ಬಿಡುಗಡೆ ಮಾಡಲು ಕೋರಿ ಪತ್ರ ಬರೆದಿದ್ದರು. ಆ ಹಿನ್ನೆಲೆಯಲ್ಲಿ 10 ಕೋಟಿ ರೂ. ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಬಿಡುಗಡೆ ಮಾಡಿರುವ ಅನುದಾನವನ್ನು ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕೈಗೊಳ್ಳುವ ಕಾಮಗಾರಿಗಳಿಗೆ ಮಾತ್ರ ಬಳಕೆ ಮಾಡಬೇಕು. ಕಾಮಗಾರಿಗಳ ಕ್ರಿಯಾ ಯೋಜನೆಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯಬೇಕು.
ಕಾಮಗಾರಿಗಳನ್ನು ಕೆಟಿಪಿಪಿ ಕಾಯ್ದೆಯನ್ವಯ ಅನುಷ್ಠಾನಗೊಳಿಸಬೇಕು. ಕಾಮಗಾರಿಗಳ ಗುಣಮಟ್ಟ 3ನೆ ವ್ಯಕ್ತಿಗಳ ಮೂಲಕ ತಪಾಸಣೆಗೆ ಒಳಪಡಿಸತಕ್ಕದ್ದು. ಅಲ್ಲದೆ, ಅನುದಾನ ಬಳಕೆ ಪ್ರಮಾಣ ಪತ್ರವನ್ನು ಸಕಾರಕ್ಕೆ ತಪ್ಪದೆ ಸಲ್ಲಿಸತಕ್ಕದ್ದು ಎಂದು ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.