ಕೆಲಸ ಮಾಡಲು ಆಗದಿದ್ದರೆ ಇಲ್ಲಿಂದ ತೊಲಗಿ: ಸರ್ಕಾರಿ ವೈದ್ಯರಿಗೆ ಸಚಿವ ಶ್ರೀರಾಮುಲು ಎಚ್ಚರಿಕೆ

Update: 2019-09-26 17:12 GMT

ಕೊಡಗು, ಸೆ.26: ಈ ಸರ್ಕಾರದಲ್ಲಿ ನಾನು ಆರೋಗ್ಯ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡೊಕೆ ನಿಮಗೆ ಆಗಲ್ಲ ಅಂದ್ರೆ ಇಲ್ಲಿಂದ ತೊಲಗಿ ಎಂದು ಸರ್ಕಾರಿ ವೈದ್ಯರಿಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಲು ಭೇಟಿ ನೀಡಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಎಂತಹ ಪರಿಸ್ಥಿತಿಗೂ ನಾನು ಬಗ್ಗುವುದಿಲ್ಲ. ಸರ್ಕಾರಿ ವೈದ್ಯರು ಎರಡು ಬೋಟ್‌ಗಳ ಮೇಲೆ ಕಾಲು ಇಡಬಾರದು‌. ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಎಂಬಿಬಿಎಸ್ ಪದವಿ ಮುಗಿಸಿ ಹೊರ ಬರುತ್ತಿದ್ದು, ನಿರುದ್ಯೋಗದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರಿ ವೈದ್ಯರು ಎರಡೂ ಕಡೆ ಕೆಲಸ ಮಾಡುವುದೇ ಆದರೆ ಮೊದಲು ಇಲ್ಲಿಂದ ತೊಲಗಿ ಎಂದು ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದರು.

ವೈದ್ಯರು ಕರ್ತವ್ಯಕ್ಕೆ ಸೇರುವಾಗ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಪ್ರಮಾಣ ಮಾಡಿರುತ್ತೀರಿ. ಅದರಂತೆ ನೀವು ನಡೆದುಕೊಳ್ಳಬೇಕು. ಎಲ್ಲಾ ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ರಾಜ್ಯಮಟ್ಟದಲ್ಲಿ ಟೆಂಡರ್ ಕರೆದು ಸಿಬ್ಬಂದಿ ನೇಮಿಸುತ್ತೇವೆ ಎಂದರು.

ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೊಡಗಿಗೆ ಎಮರ್ಜೆನ್ಸಿ ಆಸ್ಪತ್ರೆಯ ಅಗತ್ಯವಿದೆ‌.‌ ಕಳೆದ ವರ್ಷ ಪ್ರವಾಹದ ಸನ್ನಿವೇಶವನ್ನು ನಾನು ಮನಗಂಡಿದ್ದೇನೆ. ಈ ಬಗ್ಗೆ ಸಿಎಂ ಹಾಗೂ ಶಾಸಕರ ಜೊತೆ ಮಾತನಾಡುತ್ತೇನೆ. ಅಲ್ಲದೆ, ಈ ಸಂಬಂಧ ಹಣಕಾಸು ಹಾಗೂ ಆಡಳಿತಾತ್ಮಕ ಅನುಮೋದನೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ.‌ ಸಿಎಂ ಅವರನ್ನು ಮುಂಚೂಣಿಯಲ್ಲಿ ನಿಂತು ಮನವೊಲಿಸುವ ಕೆಲಸ ಮಾಡುತ್ತೇನೆ. ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡುವೆ ಎಂದು ಭರವಸೆ ನೀಡಿದರು.

ಚುನಾವಣಾ ಆಯೋಗ ಆದೇಶ ನೀಡುವ ಮೊದಲೇ ಅನರ್ಹ ಶಾಸಕರ ಗೊಂದಲವನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಯಾರೂ ಭಯ ಪಡುವ ಅಗತ್ಯವಿಲ್ಲ.‌ ಈ ಸರ್ಕಾರ ಸುಗಮವಾಗಿ ಮೂರು ವರ್ಷ ಪೂರೈಸಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News