ಬಿಎಸ್‌ವೈಯನ್ನು ಕಡೆಗಣಿಸಿದರೆ ಸಾಮೂಹಿಕ ರಾಜೀನಾಮೆ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಗೆ ಎಚ್ಚರಿಕೆ

Update: 2019-09-27 14:10 GMT

ಬೆಂಗಳೂರು, ಸೆ. 27: ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಡೆಗಣಿಸಿ ಪಕ್ಷ ಸಂಘಟನೆಗೆ ಮುಂದಾದರೆ ಉತ್ತರ ಕರ್ನಾಟಕ ಭಾಗದ ನಿಷ್ಠಾವಂತ ಕಾರ್ಯಕರ್ತರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತಂದ ಬಿಎಸ್‌ವೈ ಅವರನ್ನು ಪಕ್ಷ ಸಂಘಟನೆ, ಆಡಳಿತಾತ್ಮಕ ವಿಚಾರಗಳಲ್ಲಿ ಕಡೆಗಣಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ಬಿಎಸ್‌ವೈ ಅವರು ವೀರಶೈವ-ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕ. ರೈತ, ಕಾರ್ಮಿಕ, ಬಡವ-ಬಲ್ಲಿದರಾದಿಯಾಗಿ ಸರ್ವ ಜನಾಂಗದವರು ಅವರನ್ನು ಅಭಿಮಾನದಿಂದ ನೋಡುತ್ತಾರೆ. ಅವರ ಜನಪರ ಸಾಮಾಜಿಕ ಕಳಕಳಿ ಮೆಚ್ಚಿ ಪಕ್ಷಕ್ಕೆ ಮತ ಹಾಕಿ, ರಾಜ್ಯದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿದ್ದಾರೆ ಎಂದು ಸ್ಮರಿಸಿದ್ದಾರೆ.

ತಮ್ಮ ಆರೋಗ್ಯವನ್ನು ಲೆಕ್ಕಿಸದೆ, ಇಳಿ ವಯಸ್ಸಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಿ ಪಕ್ಷ ಕಟ್ಟಿದವರು ಯಡಿಯೂರಪ್ಪ, ನಮ್ಮ ಹೆಮ್ಮೆಯ ನಾಯಕ. ಜಾತಿ, ಧರ್ಮದ ಎಲ್ಲೆ ಮೀರಿ, ರಾಜ್ಯದ ಜನರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಂತಹ ನಾಯಕರ ಕಡೆಗಣನೆ ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಪಕ್ಷದ ಸಂಘಟನೆ ಹಳಿ ತಪ್ಪಿದೆ. ಯೋಗ್ಯತೆ ಇಲ್ಲದವರು ಪಕ್ಷದ ಹೆಸರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವಾಗ ಯಾವ ಮುಲಾಜಿಲ್ಲದೆ, ಅಂತವರನ್ನು ಪಕ್ಷದ ಸಂಘಟನೆ ಚಟುವಟಿಕೆಗಳಿಂದ ದೂರವಿಟ್ಟು ಪಕ್ಷವನ್ನು ಸಮರ್ಥವಾಗಿ ಕಟ್ಟಿದವರು ಯಡಿಯೂರಪ್ಪ.

25 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದರ ಹಿಂದೆ ಯಡಿಯೂರಪ್ಪ ಎನ್ನುವ ಹೆಸರಿನ ಪಾತ್ರ ತುಂಬಾ ದೊಡ್ಡದಿದೆ ಎನ್ನುವುದನ್ನು ಯಾರೂ ಮರೆಯಬಾರದು. ನಿಮ್ಮ ಗೆಲುವಿನ ಹಿಂದಿನ ಶಕ್ತಿಯೂ ಯಡಿಯೂರಪ್ಪ ಎನ್ನುವುದು ನೀವೂ ಮರೆಯಬಾರದು ಎಂದು ಕಟೀಲ್‌ಗೆ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News