×
Ad

‘ಅವಾಚ್ಯ ಶಬ್ದ ಬಳಕೆ’ ವಿಡಿಯೋ ವೈರಲ್": ಡಿಸಿಎಂ ಲಕ್ಷ್ಮಣ ಸವದಿ ನಡೆಗೆ ರಮೇಶ್ ಜಾರಕಿಹೊಳಿ ಗರಂ

Update: 2019-09-27 19:53 IST

ಬೆಂಗಳೂರು, ಸೆ.27: ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ಫೋನ್‌ನಲ್ಲಿ ಮಾತನಾಡುವಾಗ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಎಂಬ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮಹೇಶ್ ಕುಮಟಳ್ಳಿ ಕಣ್ಣೀರು ಹಾಕಿದರೆ, ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಯಕರ್ತರ ಜೊತೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಮೊಬೈಲ್‌ನಲ್ಲಿ ಮಾತನಾಡುತ್ತ, ‘ಅನರ್ಹ ಶಾಸಕರು ದರಿದ್ರ ಸೂ.... ಮಕ್ಕಳ ಬಗ್ಗೆ ಮಾತನಾಡಿ, ನನ್ನ ಮೂಡ್ ಯಾಕೆ ಹಾಳು ಮಾಡುತ್ತೀರಾ’ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕುಮಟಳ್ಳಿ ಕಣ್ಣೀರು: ಲಕ್ಷ್ಮಣ ಸವದಿಯ ವಿಡಿಯೋ ನೋಡಿದ ಬಳಿಕ ಕಣ್ಣೀರು ಹಾಕಿರುವ ಮಹೇಶ್ ಕುಮಟಳ್ಳಿ, ಯಾವ ಸಂದರ್ಭ, ಯಾವ ವಿಚಾರದ ಹಿನ್ನೆಲೆಯಲ್ಲಿ ಅವರು ಈ ರೀತಿಯ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ನಾನು ಕೂಡ ಜನರ ಮಧ್ಯೆ ಇದ್ದು ಕೆಲಸ ಮಾಡಿದ್ದೇನೆ. ಅವರ ಮಾತಿನಿಂದ ನನಗೆ ನೋವಾಗಿದೆ ಎಂದು ಕಣ್ಣೀರು ಹಾಕಿದರು.

ಅವರು ಕ್ಷಮೆಯಾಚಿಸಲಿ ಎಂದು ಬಯಸುವುದಿಲ್ಲ. ನನ್ನ ಕೆಲಸ ಏನಿದೆಯೋ ಅದನ್ನು ಮಾತ್ರ ಮಾಡುತ್ತೇನೆ. ವಿಷ ಕೊಟ್ಟರೂ ಅಮೃತವಾಗಲಿ ಎಂದು ಬಯಸುವವನು ನಾನು, ಭಗವಂತ ಅವರಿಗೂ ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಳ್ಳುತ್ತೇನೆ. ಅವರು ನನ್ನ ಬಗ್ಗೆ ಆ ರೀತಿ ಮಾತನಾಡಲು ನಾನು ಅಂತಹದ್ದು ಏನು ಮಾಡಿದ್ದೇನೋ ಗೊತ್ತಿಲ್ಲ. ಈ ವಿಚಾರವನ್ನು ನಾನು ಯಾರ ಗಮನಕ್ಕೂ ತರಲು ಬಯಸುವುದಿಲ್ಲ ಎಂದು ಮಹೇಶ್ ಕುಮಟಳ್ಳಿ ನೊಂದು ನುಡಿದರು.

ನಾಲಗೆ ಬಿಗಿ ಹಿಡಿದು ಮಾತನಾಡಲಿ: ಲಕ್ಷ್ಮಣ ಸವದಿ ಆ ರೀತಿ ಮಾತನಾಡಿದ್ದು ಸರಿಯಲ್ಲ. ಆತ ತನ್ನ ನಾಲಗೆಯಿಂದಾಗಿಯೇ ಹಾಳಾಗಿದ್ದಾನೆ. ನಾಲಗೆ ತುಂಬಾ ಮುಖ್ಯ, ಅಧಿಕಾರ ಬರುತ್ತೆ ಹೋಗುತ್ತೆ. ಆದರೆ, ನಾಲಗೆ ತುಂಬಾನೇ ಮುಖ್ಯ. 2018ರಲ್ಲಿ ಆತ ಚುನಾವಣೆಯಲ್ಲಿ ಸೋಲಲು ಆತನ ನಾಲಗೆಯೇ ಕಾರಣ. ಅದನ್ನು ಬಿಗಿ ಹಿಡಿದು ಮಾತನಾಡುವುದನ್ನು ಕಲಿಯಲಿ ಎಂದು ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News