ಮಹಿಷ ದಸರಾಗೆ ಅಡ್ಡಿಪಡಿಸಿದ ಪ್ರತಾಪ್ ಸಿಂಹ ಸಂಘಪರಿವಾರದ ಗುಲಾಮ: ಜ್ಞಾನಪ್ರಕಾಶ್ ಸ್ವಾಮೀಜಿ

Update: 2019-09-27 14:27 GMT

ಮೈಸೂರು, ಸೆ.27: ಮೂಲನಿವಾಸಿಗಳ ಹಬ್ಬ ಮಹಿಷ ದಸರಾ ಆಚರಣೆಗೆ ಅಡ್ಡಿಪಡಿಸಿದ ಸಂಸದ ಪ್ರತಾಪ್ ಸಿಂಹ ಓರ್ವ ಶಂಡ ಎಂದು ಜ್ಞಾನಪ್ರಕಾಶ್ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಿಂದಲೂ ಮಹಿಷ ವಂಶದ ನಾವು ಮಹಿಷ ದಸರಾವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಹಿಂದೆ ಇದ್ದ ಸರಕಾರಗಳು ನಮಗೆ ಅನುಮತಿ ನೀಡಿವೆ. ನಾವು ಯಾರ ಭಾವನೆಗೂ ಧಕ್ಕೆ ತರದ ರೀತಿ ನಮ್ಮ  ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಈ ಶಂಡ ಸಂಸದ ನಮ್ಮನ್ನು ನೇರವಾಗಿ ಎದುರಿಸಲು ಆಗದೆ ಅಧಿಕಾರದ ದರ್ಪದಿಂದ ಅಲ್ಲಿ 144ನೇ ಸೆಕ್ಷನ್ ಜಾರಿಗೊಳಿಸಿದ್ದಾನೆ ಎಂದು ವಾಗ್ದಾಳಿ ನಡೆಸಿದರು.

ಹಿಂದೆ ಇದ್ದ ಸರಕಾರಕ್ಕೊಂದು ಕಾನೂನು, ಈಗಿನ ಸರಕಾರಕ್ಕೆ ಒಂದು ಕಾನೂನು ಯಾಕೆ ಎಂದು ಪ್ರಶ್ನಿಸಿದ ಸ್ವಾಮೀಜಿ, ಮಹಿಷ ದಸರಾ ಏಕೆ ನಿಲ್ಲಿಸಿದ್ದೀರಿ ಎಂದು ಕಾರಣ ಕೊಡಬೇಕು. ಇಲ್ಲದಿದ್ದರೆ ಸರಕಾರದ ವತಿಯಿಂದ ಆಚರಣೆ ಮಾಡುವ ದಸರಾವನ್ನು ಬಹಿಷ್ಕರಿಸಿ ಮುಖ್ಯಮಂತ್ರಿ ಮತ್ತು ದಸರಾದಲ್ಲಿ ಪಾಲ್ಗೊಳ್ಳುವ ರಾಜ್ಯಪಾಲರನ್ನು ಘೇರಾವ್ ಮಾಡಲಾಗುವುದು ಎಂದು ಎಚ್ಚರಿಸಿದರು.

ಮಿಸ್ಟರ್ ಪ್ರತಾಪ್ ಸಿಂಹ, ನಿನಗೆ ತಾಕತ್ತಿದ್ದರೆ ನಮ್ಮ ಬಳಿ ಬಂದು ಮಾತನಾಡು. ಇತಿಹಾಸವೇ ಗೊತ್ತಿಲ್ಲದ ನೀನು ಸಂಘಪರಿವಾರದ ಗುಲಾಮನ ರೀತಿ ವರ್ತಿಸುತ್ತಿದ್ದೀಯ. 144ನೇ ಸೆಕ್ಷನ್ ಜಾರಿಯಲ್ಲಿದ್ದರೂ ಹನುಮ ಜಯಂತಿ ಆಚರಣೆ ಮಾಡಿ ಕಾನೂನಿಗೆ ಅವಮಾನ ಮಾಡಿದ್ದೀಯ. ಆದರೆ ನಾವು 144ನೇ ಸೆಕ್ಷನ್ ಜಾರಿ ಮಾಡಿದಕ್ಕೆ ಅಲ್ಲಿ ಮಹಿಷ ದಸರಾ ಆಚರಣೆ ಮಾಡದೆ ಕಾನೂನನ್ನು ಗೌರವಿಸಿದ್ದೇವೆ. ನಾವು ಈ ದೇಶದ ಕಾನೂನನ್ನು ರೂಪಿಸಿದವರು. ಹಾಗಾಗಿ ಕಾನೂನಿಗೆ ಗೌರವ ಕೊಟ್ಟು ಮಹಿಷ ದಸರಾ ಆಚರಣೆ ಮಾಡಲಿಲ್ಲ, ಹೊರತು ನಿಮ್ಮ ಸರಕಾರಕ್ಕೆ ಹೆದರಿ ಅಲ್ಲ ಎಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News