ನೆರೆ ಸಂತ್ರಸ್ತರಿಗೆ ನೆರವಿಗೆ ಹೆಚ್ಚುವರಿ 500 ಕೋಟಿ ರೂ.ಬಿಡುಗಡೆಗೆ ಕ್ರಮ: ಸಚಿವ ಆರ್.ಅಶೋಕ್

Update: 2019-09-27 16:54 GMT

ಬೆಂಗಳೂರು, ಸೆ. 27: ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ 500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 3 ಕೋಟಿ ರೂ.ನಿಂದ 8 ಕೋಟಿ ರೂ.ಗಳಷ್ಟು ಹಣವಿದೆ. ಅದರ ಜೊತೆಗೆ ಹೆಚ್ಚುವರಿಯಾಗಿ 500 ಕೋಟಿ ರೂ.ಬಿಡುಗಡೆಗೆ ಕ್ರಮ ವಹಿಸಲಾಗಿದೆ ಎಂದರು.

ಹೆಚ್ಚುವರಿ ಹಣದಲ್ಲಿ ರಸ್ತೆ, ಸೇತುವೆ, ಕಟ್ಟಡ ನಿರ್ಮಾಣ ಸೇರಿದಂತೆ ಇನ್ನಿತರ ದುರಸ್ತಿ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಬೆಳಗಾವಿ ಜಿಲ್ಲೆಗೆ 200 ಕೋಟಿ ರೂ., ಬಾಗಲಕೋಟೆ-50 ಕೋಟಿ ರೂ., ಹಾವೇರಿ-35 ಕೋಟಿ ರೂ., ಹಾಸನ-15 ಕೋಟಿ ರೂ., ಮೈಸೂರು-30 ಕೋಟಿ ರೂ., ಚಿಕ್ಕಮಗಳೂರು-30 ಕೋಟಿ ರೂ., ಶಿವಮೊಗ್ಗ-10 ಕೋಟಿ ರೂ., ಧಾರವಾಡ-40 ಕೋಟಿ ರೂ. ಹಾಗೂ ಕೊಡಗು- 10ಕೋಟಿ ರೂ.ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಜನರೆ ಮನೆ ನಿರ್ಮಿಸಿಕೊಳ್ಳಬೇಕು: ನೆರೆ ಸಂತ್ರಸ್ತರಿಗೆ ಈ ಬಾರಿ ನಾವು ಸರಕಾರದಿಂದ ಮನೆ ನಿರ್ಮಿಸುವುದಿಲ್ಲ. ಬದಲಿಗೆ ಜನರೆ ತಮಗೆ ಅನುಕೂಲ ಆಗುವ ಸ್ಥಳಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ತಲಾ 5 ಲಕ್ಷ ರೂ.ನೆರವು ನೀಡುತ್ತಿದೆ ಎಂದು ಅವರು ತಿಳಿಸಿದರು.

ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಭೂ ಕುಸಿತ ಉಂಟಾಗಿ 350 ಎಕರೆಗೂ ಹೆಚ್ಚು ವಿಸ್ತೀರ್ಣದ ತೋಟ ಹಾಳಾಗಿದೆ. ತೋಟ ಕಳೆದುಕೊಂಡವರಿಗೆ ಪರ್ಯಾಯ ಸರಕಾರಿ ಭೂಮಿ ನೀಡಲಾಗುವುದು. ಅಲ್ಲದೆ, ಭೂ ಕುಸಿತದಿಂದ ಹಾಳಾಗಿರುವ ಭೂಮಿಯನ್ನು ಸರಕಾರ ವಶಪಡಿಸಿಕೊಳ್ಳಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News