ನಿನಗೆ ತಾಕತ್ತಿದ್ದರೆ ರಣಾಂಗಣಕ್ಕೆ ಬಾ: ಪ್ರತಾಪ್ ಸಿಂಹಗೆ ಮಾಜಿ ಮೇಯರ್ ಪುರುಷೋತ್ತಮ್ ಸವಾಲು

Update: 2019-09-27 17:17 GMT

ಮೈಸೂರು ಸೆ.27: ನಿನಗೆ ತಾಕತ್ತಿದ್ದರೆ ರಣಾಂಗಣಕ್ಕೆ ಬಾ, ಏಕಾಂಗಿಯಾದರೂ ಸರಿ, ಇಲ್ಲ ದಂಡು ದಾಳಿ ಕಟ್ಟಿಕೊಂಡು ಬಂದರೂ ಸರಿ. ನಿನ್ನನ್ನು ಎದುರಿಸುವ ಶಕ್ತಿ ಈ ಮೂಲನಿವಾಸಿಗಳಿಗೆ ಇದೆ ಎಂದು ಮಾಜಿ ಮೇಯರ್ ಹಾಗೂ ಮಹಿಷ ದಸರಾ ಆಚರಣೆ ಸಮಿತಿಯ ರೂವಾರಿ ಪುರುಷೋತ್ತಮ್ ಅವರು ಸಂಸದ ಪ್ರತಾಪ್ ಸಿಂಹನಿಗೆ ಸವಾಲು ಹಾಕಿದರು.

ಮಹಾಬಲ ಬೆಟ್ಟದಲ್ಲಿ ಶುಕ್ರವಾರ ನಡೆಯಬೇಕಿದ್ದ ಮಹಿಷ ದಸರಾ ಆಚರಣೆಗೆ ಅಡ್ಡಿ ಪಡಿಸಿದ ಹಿನ್ನೆಲೆ, ನಗರದ ಅಶೋಕಪುರಂ ನಲ್ಲಿರುವ ಅಂಬೇಡ್ಕರ್ ಪಾರ್ಕ್‍ನಲ್ಲಿ ಸಾಂಕೇತಿಕವಾಗಿ ಮಹಿಷ ದಸರಾ ಆಚರಣೆ ಮಾಡಿ ಪ್ರಶಸ್ತಿ ಪ್ರಧಾನ ಮಾಡಿ ನಂತರ ಅವರು ಮಾತನಾಡಿದರು.

ಸಂಸದ ಪ್ರತಾಪ್ ಸಿಂಹ ನಾವು ಇಲ್ಲದ ಸಮಯದಲ್ಲಿ, ಗುರುವಾರ ಚಾಮುಂಡಿ ಬೆಟ್ಟದಲ್ಲಿ ಮಹಿಷ ವೇದಿಕೆ ನಿರ್ಮಾಣ ಮಾಡುತ್ತಿದ್ದ ನಮ್ಮ ಕಾರ್ಯಕರ್ತರ ಮೇಲೆ ಗೂಂಡಾಗಳನ್ನು ಬಿಟ್ಟು ಹಲ್ಲೆ ಮಾಡಿಸಿ ವೇದಿಕೆಯನ್ನು ಕಿತ್ತು ಹಾಕಿಸಿದ್ದಾನೆ. ನಿನಗೆ ತಾಕತ್ತಿದ್ದರೆ ನಮ್ಮ ಬಳಿ ಬಾ, ಮಾತನಾಡು. ಒಬ್ಬನೇ ಆದರೂ ಸರಿ, ದಂಡು ದಾಳಿ ಕಟ್ಟಿಕೊಂಡು ಬಂದರೂ ಸರಿ. ನಿನ್ನನ್ನು ಮಟ್ಟಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮದು ಬೌದ್ಧ ಸಂಸ್ಕೃತಿ. ನಾವು ಈ ದೇಶದ ಮೂಲನಿವಾಸಿಗಳು. ನೀನಾದರೆ ಆರ್ಯರ ಸಂಸ್ಕೃತಿಯಲ್ಲಿ ಬೆಳೆದು ಅವರ ಗುಲಾಮನಾಗಿ ಬದುಕುತ್ತಿರುವವನು. ನಿನ್ನ ಸಂಸ್ಕೃತಿ ಎಂತಹದು ಎಂದು ಈ ನಾಡಿನ ಜನಕ್ಕೆ ಗೊತ್ತು. ನೀನು ಎಷ್ಟು ಜನ ಹೆಣ್ಣುಮಕ್ಕಳಿಗೆ ಕಾಟ ಕೊಟ್ಟಿದ್ದೀಯ ಎಂದು ಗೊತ್ತು. ನಿನಗೆ ತಾಕತ್ತಿದ್ದರೆ ನಮ್ಮ ಎದರು ಬಂದು ಮಾತನಾಡು ಎಂದು ಹೇಳಿದರು.

ದಸರಾ ಆಚರಣೆಗೆ ಬಿಡುವುದಿಲ್ಲ: ಈ ದೇಶದಲ್ಲಿ 40 ಕೋಟಿ ಜನಸಂಖ್ಯೆ ಇರುವ ದಲಿತರನ್ನು ಕೆಣಕಿದ್ದೀಯ. ಅವರ ಮನಸ್ಸನ್ನು ಕಲುಷಿತಗೊಳಿಸಿದ್ದೀಯ. ನಮ್ಮ ಹಬ್ಬವನ್ನು ಆಚರಿಸಲು ಬಿಡುವುದಿಲ್ಲ ಎಂದ ಮೇಲೆ ನೀವು ಆಚರಣೆ ಮಾಡುವ ದಸರಾವನ್ನು ನಾವು ಬಿಡುವುದಿಲ್ಲ. ಏನೇ ಆದರೂ ಸರಿ ನಿಮ್ಮ ದಸರಾ ಆಚರಣೆಯನ್ನು ನಿಲ್ಲಿಸಿಯೇ ನಿಲ್ಲಿಸುತ್ತೇವೆ ಎಂದು ಹೇಳಿದರು.

ನಾವು ಸತ್ಯ ಮತ್ತು ಅಹಿಂಸ ಮಾರ್ಗದಲ್ಲಿ ನಡೆಯುತ್ತಿರುವವರು. ನಮ್ಮನ್ನು ಕೆಣಕಿದ ಮೇಲೆ ಸುಮ್ಮನೆ ಇರುವುದಿಲ್ಲ. ಇಂದಿನಿಂದ ನಿನ್ನ ಜೊತೆ ಸಮರಕ್ಕೆ ಸಿದ್ದ. ನಿನಗೆ ತಾಕತ್ತಿದ್ದರೆ ನಮ್ಮನ್ನು ತಡಿ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಭೋದಿದತ್ತ ಬಂತೇಜಿ, ಬುದ್ಧ ಪ್ರಕಾಶ್ ಬಂತೇಜಿ, ಜ್ಞಾನಪ್ರಕಾಶ್ ಸ್ವಾಮೀಜಿ, ಬಸವಲಿಂಗಮೂರ್ತಿ ಶರಣರು, ಬಸವಹರಳಯ್ಯ ಸ್ವಾಮೀಜಿ ವಹಿಸಿದ್ದರು.

ಇತಿಹಾಸಕಾರ ಡಾ.ಚಿನ್ನಸ್ವಾಮಿ ಸೋಸಲೆ ಮಾತನಾಡಿದರು. ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್, ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಜಿ.ಎಂ.ಗಾಡ್ಕರ್, ಹರಿಹರ ಆನಂದಸ್ವಾಮಿ, ಸೋಮಯ್ಯ ಮಲೆಯೂರು, ಪ್ರೊ.ನಂಜರಾಜೇ ಅರಸ್, ಸಾಹಿತಿ ಸಿದ್ದಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News