ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಸಿದ್ದರಾಮಯ್ಯ ಸರಕಾರದಲ್ಲಿ ಹೆಚ್ಚಿನ ಅನುದಾನ ಸಿಕ್ಕಿತ್ತು: ಎಂ.ಬಿ.ಪಾಟೀಲ್

Update: 2019-09-27 17:27 GMT

ವಿಜಯಪುರ, ಸೆ.27: ಭದ್ರಾ ಮೇಲ್ದಂಡೆ ಯೋಜನೆಯು ರಾಜ್ಯದ ಬೃಹತ್ ನೀರಾವರಿ ಯೋಜನೆಗಳಲ್ಲೊಂದು. ನಮ್ಮ ಸರಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹೆಚ್ಚಿನ ಅನುದಾನವನ್ನು ನೀಡಿ ಕುಂಠಿತಗೊಂಡಿದ್ದ, ಸುರಂಗ ಮಾರ್ಗದ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಕೈಗೊಳ್ಳಲಾಗಿತ್ತು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಸ್ಮರಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಹೂಳು ತುಂಬಿ ನಶಿಸಿದ್ದ ಕುಮಟಗಿ ಕೆರೆಯನ್ನು ಕೆರೆ ತುಂಬುವ ಯೋಜನೆಯಡಿ ಅಭಿವೃದ್ಧಿಪಡಿಸಿ ತುಂಬಿಸಲಾಗಿದ್ದು, ಸುತ್ತಮುತ್ತಲ ಹಳ್ಳಿಗಳಿಗೆ ನೀರಿನ ಆಸರೆಯಾಗಿದೆ ಎಂದು ತಿಳಿಸಿದ್ದಾರೆ.

ಕೆರೆಯ ಬಳಿಯಿರುವ ಐತಿಹಾಸಿಕ ಆದಿಲ್ ಶಾಹಿ ಬೇಸಿಗೆ ಅರಮನೆಯಲ್ಲಿನ ಸುರಂಗ ಜಲಮಾರ್ಗದ ಮೂಲಕ ಜಲವಿಹಾರಕ್ಕೆ ನೀರು ಹರಿದು ಗತಕಾಲದ ವೈಭವವನ್ನು ನೆನಪಿಸುತ್ತಿದೆ. ಕೆರೆ ತುಂಬುವ ಯೋಜನೆಯನ್ನು ಸಿದ್ಧಪಡಿಸುವಾಗ ಜನ-ಜಾನುವಾರುಗಳಿಗೆ ನೀರು, ಕೃಷಿ ಜೊತೆಗೆ ಅದರಿಂದಾಗುವ ಪೂರಕ ಫಲಗಳನ್ನು ಯೋಚಿಸಲಾಗಿತ್ತು ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. ಇದು ಜಲಮೂಲಗಳ ಪುನಶ್ಚೇತನ, ಅಂತರ್ಜಲ ಮರುಪೂರಣ, ಪರಿಸರ-ಜೀವ ವೈವಿಧ್ಯತೆಯ ಸಂರಕ್ಷಣೆ, ಪ್ರವಾಸಿತಾಣ, ಮನರಂಜನೆ, ಜಲಕ್ರೀಡೆಗೆ ಪ್ರೋತ್ಸಾಹ ಇತ್ಯಾದಿ ಪೂರಕ ಪ್ರಯೋಜನಗಳನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ನಮ್ಮದೂ ಸಹ ಬರದ ಜಿಲ್ಲೆಯಾಗಿತ್ತು. ಅಲ್ಲಿಂದ ಬಂದಿರುವ ನಾನು ಮಧ್ಯ ಕರ್ನಾಟಕ ಭಾಗದ ನೀರಿನ ಬವಣೆಯನ್ನು ಅರ್ಥೈಸಿಕೊಂಡಿದ್ದೆ. ಹೀಗಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ನೀಡಿ ಕುಂಠಿತವಾಗಿದ್ದ ಕಾಮಗಾರಿಗಳಿಗೆ ವೇಗದ ಸ್ಪರ್ಶ ನೀಡಲಾಗಿತ್ತು. ಈ ಮಹಾತ್ಕಾರ್ಯಕ್ಕೆ ನನ್ನ ಸೇವೆ ಸಲ್ಲಿಸುವ ಅವಕಾಶ ನೀಡಿದ ಜನತೆಗೆ ಧನ್ಯವಾದಗಳು ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News