ಬಿಎಸ್‍ವೈ ಪ್ರತ್ಯೇಕ ಪಕ್ಷ ಕಟ್ಟಿ ಎಷ್ಟು ಸೀಟು ತೆಗೆದುಕೊಂಡರು: ಕೆ.ಎಸ್.ಈಶ್ವರಪ್ಪ ಪ್ರಶ್ನೆ

Update: 2019-09-28 16:14 GMT

ಶಿವಮೊಗ್ಗ, ಸೆ. 28: 'ಯಾವುದೇ ವ್ಯಕ್ತಿ ಅಧಿಕಾರಕ್ಕೇರಲು ಸಂಘಟನೆ ಅನಿವಾರ್ಯ. ಸಂಘಟನೆ ಮೀರಿ ಬೆಳೆಯಲು ಹೋದವರು ತಾತ್ಕಾಲಿಕವಾಗಿ ಯಶಸ್ವಿಯಾಗುತ್ತಾರೆ ವಿನಃ ಅವರಿಗೆ ಯಾವುದೇ ಲಾಭವಾಗುವುದಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ ಪ್ರತ್ಯೇಕ ಪಕ್ಷ ಕಟ್ಟಿ ಮೂರು ಮತ್ತೊಂದು ಸ್ಥಾನ ತೆಗೆದುಕೊಂಡರು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. 

ಶನಿವಾರ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಂಘಟನೆ ಮೀರಿ ಹೋಗಲೆತ್ನಿಸುವವರು ರಾಜ್ಯದಲ್ಲಾಗಲಿ, ದೇಶದಲ್ಲಾಗಲಿ ಉದ್ದಾರವಾಗಲು ಸಾಧ್ಯವಾಗುವುದಿಲ್ಲ. ಅಧಿಕಾರಕ್ಕೆ ಬರುವವರು ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಅವರು ನಾಶವಾಗುತ್ತಾರೆ ಹೊರತು ಸಂಘಟನೆ ನಾಶವಾಗುವುದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಕೆಳಕ್ಕೆ ಬಿದ್ದಿದ್ದಾರೆ ಎಂದು ಅವರ ವಿರುದ್ಧ ಮತ್ತೊಂದು ಕಲ್ಲು ಹೊಡೆಯಲು ಇಚ್ಚಿಸುವುದಿಲ್ಲ. ಆದರೆ ಯಾವುದೇ ವ್ಯಕ್ತಿಗೆ ಸ್ಥಾನಮಾನ ಶಾಶ್ವತವಲ್ಲ. ಇದು ನನಗಿರಬಹುದು, ಸಿದ್ದರಾಮಯ್ಯ, ಕುಮಾರಸ್ವಾಮಿಗಿರಬಹುದು, ಇಲ್ಲವೇ ಯಡಿಯೂರಪ್ಪರಿಗಿರಬಹುದು. ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ, ಸ್ಥಾನಮಾನ ಸಿಕ್ಕ ವೇಳೆ ಪಕ್ಷದ ಜೊತೆ ಸಂಬಂಧ ಹೇಗೆ ಇಟ್ಟುಕೊಂಡಿದ್ದಾರೆ ಎಂಬುವುದು ಈ ರೀತಿಯ ಘಟನೆಗಳಿಂದ ಗೊತ್ತಾಗುತ್ತದೆ ಎಂದರು.

ಮುಖ್ಯಮಂತ್ರಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಕೈಗೊಂಡ ಸರ್ವಾಧಿಕಾರಿ ನಿಲುವುಗಳಿಂದ, ಕುತಂತ್ರ ರಾಜಕಾರಣಗಳಿಂದ ಕಾಂಗ್ರೆಸ್ ಪಕ್ಷ ನಿರ್ನಾಮಕ್ಕೆ ಕಾರಣವಾಯಿತು. ಅವರು ಅಧಿಕಾರ ಕಳೆದುಕೊಂಡರು. ಚುನಾವಣೆಯಲ್ಲಿ ಸೋಲುವಂತಾಯಿತು. ಕಾಂಗ್ರೆಸ್ ಕೂಡ ಹಾಳಾಯಿತು. ಇದು ಎಲ್ಲರಿಗೂ ಪಾಠ. ಇದನ್ನು ನಾನು ಬರೀ ಸಿದ್ದರಾಮಯ್ಯರಿಗೆ ಮಾತ್ರ ಹೇಳಲು ಬಯಸುವುದಿಲ್ಲ. ಯಾವುದೇ ವ್ಯಕ್ತಿ ಅಧಿಕಾರಕ್ಕೇರಲು ಪಕ್ಷದ ಸಹಾಯವಿಲ್ಲದೆ ಸಾಧ್ಯವಿಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ ಪ್ರತ್ಯೇಕ ಪಕ್ಷ ಕಟ್ಟಿ ಎಷ್ಟು ಸೀಟು ತೆಗೆದುಕೊಂಡರು ಎಂದು ಪ್ರಶ್ನಿಸಿದರು.

ನೆಲಕಚ್ಚಿದೆ: ಸಂಘಟನೆ ಮೀರಿ ಸಿದ್ದರಾಮಯ್ಯ ನಡೆದುಕೊಂಡ ಪರಿಣಾಮ ಕಾಂಗ್ರೆಸ್ ನೆಲಕಚ್ಚಿದೆ. ಕಾಂಗ್ರೆಸ್‍ನಲ್ಲಿ ನನ್ನ ಸೋಲಿಗೆ ರಮೇಶ್‍ ಕುಮಾರ್ ಕಾರಣ ಎಂದು ಮಾಜಿ ಕೇಂದ್ರ ಸಚಿವ ಮುನಿಯಪ್ಪ ಹೇಳುತ್ತಾರೆ. ಆದರೆ ಅವರ ಪಕ್ಷದ ಸಭೆಯಲ್ಲಿ ರಮೇಶ್ ಕುಮಾರ್ ರವರನ್ನು ಕೂರಿಸಿಕೊಂಡು ಸಿದ್ದರಾಮಯ್ಯ ಸಭೆ ನಡೆಸುತ್ತಾರೆ. ಅದು ಸಿದ್ದರಾಮಯ್ಯರವರಿಗೆ ಪಕ್ಷ ದ್ರೋಹಿ ಚಟುವಟಿಕೆ ಎಂದೆನಿಸುವುದಿಲ್ಲ. ಇದು ಸಿದ್ದರಾಮಯ್ಯನವರ ಪಕ್ಷ ಮೀರಿ ಬೆಳೆಯುವ ದುಸ್ಸಾಹಸವಾಗಿದೆ. ಇದರಿಂದ ತಾತ್ಕಾಲಿಕವಾಗಿ ಅಂತಹವರಿಗೆ ಗೆಲುವು ಸಿಗಲಿದೆ. ಅಧಿಕಾರವಿದ್ದಾಗ ಪಕ್ಷಕ್ಕೆ ಏನು ಕೆಲಸ ಮಾಡಿದೆ ಎಂಬುದು ಮುಖ್ಯ. ಆಗ ಪಕ್ಷದ ಜೊತೆ ತಾನು ಬೆಳೆಯಬಹುದು ಎಂದರು.  

ಶರಾವತಿ ತಟದಲ್ಲಿ ವಿದ್ಯುತ್ ಉತ್ಪಾದನೆ ಕುರಿತು ಸಮಗ್ರ ವರದಿ ತಯಾರಿಸಲು ಸರ್ಕಾರ ಆದೇಶಿಸಿದೆ. ಇದರಿಂದ ಮತ್ತೆ ಪ್ರತಿಭಟನೆ ಚುರುಕುಕೊಳ್ಳಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪರವರು, ಇದಕ್ಕೆ ಪ್ರತಿಭಟನೆ ಸರಿಯಲ್ಲ. ವಿದ್ಯುತ್ ಇಲ್ಲದೆ ಅನೇಕ ಗ್ರಾಮಗಳು ಇನ್ನೂ ಇವೆ. ಅದಕ್ಕೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಿದ್ಯುತ್ ಒದಗಿಸುವುದು ಸಹ ಒಂದಾಗಿದೆ. ಶರಾವತಿ ನದಿಯ ತಟದಲ್ಲಿಯೇ ಅನೇಕ ಹಳ್ಳಿಗಳು ಇಂದು ಕತ್ತಲಲ್ಲಿ ಇವೆ. ಹಾಗಾಗಿ ಇವುಗಳಿಗೆ ವಿದ್ಯುತ್ ಒದಗಿಸುವುದು ಸರ್ಕಾರದ ಮೂಲ ಕರ್ತವ್ಯ. ಹಾಗಂತ ಅರಣ್ಯ ನಾಶ ಮಾಡಿ ಒದಗಿಸುವ ಉದ್ದೇಶ ಏನು ಸರ್ಕಾರಕ್ಕೆ ಇಲ್ಲ. ನೋಡೋಣ ಡಿಪಿಆರ್ ಬರಲಿ ಏನೇನು ಆಗುತ್ತೆ ಎಂದು ತಿಳಿಸಿದರು.

ಪಕ್ಷ ದ್ರೋಹಿಗಳಿಗೆ ಬೆಂಬಲ ದೊರಕಬಾರದು
ಪಕ್ಷ ದ್ರೋಹಿಗಳಿಗೆ ಯಾವುದೇ ಪಕ್ಷದಲ್ಲಿ ಬೆಂಬಲ ದೊರಕಬಾರದು. ಅದು ಕಾಂಗ್ರೆಸ್ ಇರಲಿ, ಬಿಜೆಪಿ, ಜೆಡಿಎಸ್ ಪಕ್ಷವಾಗಲಿ. ಪಕ್ಷದ ನಿಷ್ಠಾವಂತರಿಗೆ ಯಾವತ್ತಿದ್ದರೂ ಬೆಲೆ ಇದ್ದೇ ಇದೆ. ಅಧಿಕಾರದಲ್ಲಿದ್ದವರು ಬೆಂಬಲ ಕೊಡಬಹುದು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂತವರಿಗೆ ಬೆಂಬಲ ಸಿಗಬಾರದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News