ನಿಷ್ಠಾವಂತ ಗುಲಾಮರಿಂದ ಮಹಿಷ ದಸರಾಗೆ ಅಡ್ಡಿ: ಪ್ರೊ.ಕೆ.ಎಸ್.ಭಗವಾನ್ ವಾಗ್ದಾಳಿ

Update: 2019-09-28 14:52 GMT

ಮೈಸೂರು,ಸೆ.28: ಶೂದ್ರರೆಲ್ಲರೂ ಗುಲಾಮರು ಎಂದು ವೈದಿಕ ಶಾಹಿ ಹೇಳಿದ್ದು, ಅದೇ ನಿಷ್ಠಾವಂತ ಗುಲಾಮರು ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಅಡ್ಡಿ ಪಡಿಸಿದರು ಎಂದು ಸಾಹಿತಿ ಚಿಂತಕ ಪ್ರೊ.ಕೆ.ಎಸ್. ಭಗವಾನ್ ಹೇಳಿದರು.

ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಸಹೋದರತ್ವ, ಶಾಂತಿಗಾಗಿ ಮಾತ್ರ ಹೋರಾಡುವವರಾಗಿದ್ದು, ಸರ್ವಜ್ಞ ಹೇಳಿದಂತೆ ಆನೆಯನ್ನು ಕಂಡ ನಾಯಿ ಬೊಗಳುತ್ತದೆ. ಆದರೆ ನಾಯಿಯನ್ನು ಕಂಡ ಆನೆ ಆದೇ ಕೆಲಸ ಮಾಡಿದರೆ ಅದರ ಮರ್ಯಾದೆಯೇ ಹೋಗುತ್ತದೆ ಎಂಬಂತೆ ನಾನು ಇತರರ ಮಾತಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಸಂಸದ ಪ್ರತಾಪ್‍ ಸಿಂಹ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಟೀಕಿಸಿದರು.

ಮಹಿಷ ಐತಿಹಾಸಿಕ ವ್ಯಕ್ತಿಯಾಗಿದ್ದು, ಚಾಮುಂಡಿ ಕಟ್ಟುಕತೆ. ಆಕೆ ಅಸುರ ಎಂದು ಆತನನ್ನು ಕೊಂದಿದ್ದೇ ತಪ್ಪು. ದೇಶದ ಮೇಲೆ ಬಹಳಷ್ಟು ಮಂದಿ ದಾಳಿ ಮಾಡಿದ್ದು, ಅವರನ್ನೆಲ್ಲ ಏಕೆ ಕೊಲ್ಲಲಿಲ್ಲ. ಈ ರೀತಿ ಕೊಲೆಯಾದವರೆಲ್ಲ ಸ್ಥಳೀಯರೇ ಆಗಿದ್ದಾರೆ. ಹೀಗಾಗಿ ಭಾರತದ ಇತಿಹಾಸ ಬೌದ್ಧ ಮತ್ತು ಬ್ರಾಹ್ಮಣ ಧರ್ಮದ ನಡುವೆ ನಡೆದ ಯುದ್ಧವಾಗಿದೆ ಎಂದು ವಿಶ್ಲೇಷಿಸಿದರು.

ನಾವು ಬುದ್ಧನ ನಾಡಿನಿಂದ ಬಂದವರೆಂದು ಹೇಳಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ರಾಮನ ನಾಡಿನಿಂದ ಬಂದವರೆಂದು ವಿದೇಶದಲ್ಲಿ ಏಕೆ ಹೇಳಿಕೊಳ್ಳಲಿಲ್ಲ ಎಂದು ಪ್ರಶ್ನಿಸಿ, ಅವರು ರಾಮ ಮಂದಿರ ನಿರ್ಮಾಣ ಬದಲು ಬೌದ್ಧ ವಿಹಾರ ಕಟ್ಟುತ್ತೇವೆಂದು ಹೇಳಿದ್ದರೆ ಗೌರವಿಸಬಹುದಾಗಿತ್ತು ಎಂದರು.

ಇದಕ್ಕೂ ಮೊದಲು ಇತಿಹಾಸ ತಜ್ಞ ಪ್ರೊ. ನಂಜರಾಜ ಅರಸ್ ಮಾತನಾಡಿ, ಚಾಮುಂಡಿಬೆಟ್ಟದಲ್ಲಿ ನಡೆದ ಘಟನೆ ಮೈಸೂರಿಗರು ತಲೆ ತಗ್ಗಿಸುವಂತದ್ದಾಗಿದ್ದು, ಸಂಸದ ಹಿಟ್ಲರ್ ಶಾಹಿ ಧೋರಣೆ ತಾಳಿದ್ದಾರೆ ಎಂದರು.

ಚಾಮುಂಡಿ ಮತ್ತು ಮಹಿಷಾಸುರ ವಿಷಯ ಪ್ರಸ್ತಾಪಿಸಿ, ಪುರಾಣವೇ ಇತಿಹಾಸವೆನ್ನುವುದು ತಪ್ಪು. ಚಾಮುಂಡಿ ಮೂಲತಃ ಗ್ರಾಮ ದೇವತೆಯಾಗಿದ್ದು, ಜೈನರ ಪ್ರಾಬಲ್ಯವಿದ್ದ ಚಾವುಂಡರಾಯನ ಕಾಲದಲ್ಲಿ ಜೈನರ ಯಕ್ಷಿಯಾದಳು. ಶೈವರ ಪ್ರಾಬಲ್ಯ ಬಂದಾಗ ಶೈವ ಸಂಪ್ರದಾಯವಳಾದಳು. ಟಿಪ್ಪು ಸತ್ತ ನಂತರ ರಾಜಧಾನಿ ಮೈಸೂರಿಗೆ ಬಂದು ದಿವಾನ್ ಪೂರ್ಣಯ್ಯನವರ ಪ್ರಾಬಲ್ಯದ ವೇಳೆ ಬ್ರಾಹ್ಮಣ ಅರ್ಚಕರು ಬಂದು ಶುದ್ಧ ಸಸ್ಯಾಹಾರಿಯಾದಳು. ಹೀಗೆ ಚಾಮುಂಡೇಶ್ವರಿಗೆ ನಾಲ್ಕೈದು ರೂಪಾಂತರವಾಗಿದೆ ಎಂದು ಅಭಿಪ್ರಾಯಪಟ್ಟರು.

ನಗರದ ಪಡುವಾರಹಳ್ಳಿ, ಕೆ.ಜಿ. ಕೊಪ್ಪಲು ಮೊದಲಾದ ಕಡೆ ಚಾಮುಂಡಿಹಬ್ಬದ ವೇಳೆ ಮಾಂಸಾಹಾರ ಸೇವನೆ ಆಗುತ್ತದೆ. ಹೀಗಾಗಿ ಕುರುಡು ನಂಬಿಕೆಯನ್ನೇ ಇತಿಹಾಸ ಎನ್ನುವ ಮೂಲಕ ದಾರಿ ತಪ್ಪಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಂತರಾಜು, ಸಾಹಿತಿ ಸಿದ್ದಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News