ಬೇಜವಾಬ್ದಾರಿ ಹೇಳಿಕೆ ನೀಡಿದರೆ ಸುಮ್ಮನೆ ಕೂರಲ್ಲ: ತೇಜಸ್ವಿ ಸೂರ್ಯ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ಆಕ್ರೋಶ

Update: 2019-09-28 15:07 GMT

ವಿಜಯಪುರ, ಸೆ.28: ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು ರಾಜ್ಯ ಸರಕಾರದ ಬಳಿಯೇ ಅನುದಾನವಿದೆ, ಕೇಂದ್ರ ಸರಕಾರದ ಮೊರೆ ಹೋಗುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಬಗ್ಗೆ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿದರೆ ಸುಮ್ಮನೆ ಕಣ್ಣು ಮುಚ್ಚಿಕೊಂಡು ಕೂರುವುದಿಲ್ಲ. ತೇಜಸ್ವಿ ಸೂರ್ಯ ಈ ಕೂಡಲೆ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ನಾವೇನು ಕೇಂದ್ರ ಸರಕಾರದ ಬಳಿ ಭಿಕ್ಷೆ ಕೇಳುತ್ತಿಲ್ಲ. ನೆರೆ ಹಾಗೂ ಪ್ರವಾಹದಿಂದಾಗಿ ಉತ್ತರ ಕರ್ನಾಟಕ ಭಾಗದ ಜನರ ಜೀವನ ಅಸ್ತವ್ಯಸ್ತವಾಗಿದೆ. ಸಂತ್ರಸ್ತರು ಪರಿಹಾರ ಸಿಗದೆ ಕಣ್ಣೀರು ಹಾಕುತ್ತಿದ್ದಾರೆ. ಬೇಜವಾಬ್ದಾರಿಯುತವಾಗಿ ಹೇಳಿಕೆ ನೀಡುವವರು ಒಮ್ಮೆ ಬಂದು ಜನರ ಕಷ್ಟವನ್ನು ಕಣ್ಣಾರೆ ನೋಡಲಿ ಎಂದು ಯತ್ನಾಳ್ ಆಗ್ರಹಿಸಿದರು.

ಉತ್ತರ ಕರ್ನಾಟಕದ ಬಗ್ಗೆ ಕೀಳುಮಟ್ಟದ ಹೇಳಿಕೆಗಳನ್ನು ನೀಡಿದರೆ ಅದನ್ನು ಕೇಳಿಕೊಂಡು ಸುಮ್ಮನೆ ಕೂರಲು ಇಲ್ಲಿನ ಜನಪ್ರತಿನಿಧಿಗಳಾದ ನಾವು ಇನ್ನೂ ಸತ್ತಿಲ್ಲ. ನಮಗೆ ಅನ್ಯಾಯವಾದಾಗ ಧ್ವನಿ ಎತ್ತುತ್ತೇವೆ. ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಯಾವುದೇ ಪರಿಹಾರ ಈವರೆಗೆ ಬಂದಿಲ್ಲ. ತಕ್ಷಣವೇ 5 ಸಾವಿರ ಕೋಟಿ ರೂ.ಗಳ ಪರಿಹಾರವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ನೆರೆ ಹಾಗೂ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವ ವಿಚಾರದಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು. ಎಲ್ಲ ಸಂಸದರು ಹಾಗೂ ಕೇಂದ್ರ ಸಚಿವರನ್ನು ಒಳಗೊಂಡ ನಿಯೋಗವನ್ನು ರಾಜ್ಯ ಸರಕಾರ ಪ್ರಧಾನಿ ನರೇಂದ್ರ ಮೋದಿ ಬಳಿ ತೆಗೆದುಕೊಂಡು ಹೋಗಬೇಕು. ಕೇಂದ್ರ ಸರಕಾರವು ನಮ್ಮ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಯತ್ನಾಳ್ ಹೇಳಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ವಿಚಾರ ಕೇಳಿ ನೋವಾಗಿದೆ. ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಮಾಡಿರುವುದು ಕೀಳುಮಟ್ಟದ ರಾಜಕೀಯ. ಈ ಕೃತ್ಯ ಎಸಗಿರುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News