ಡಿಕೆಶಿ ಪಾಪದ ಕೊಡ ತುಂಬಿದೆ: ಎಸ್.ಆರ್.ಹಿರೇಮಠ್

Update: 2019-09-28 16:05 GMT

ಹೊಸದಿಲ್ಲಿ, ಸೆ.28: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪಾಪದ ಕೊಡ ತುಂಬಿರುವುದರಿಂದಲೇ ಅವರು ಈಗ ತಿಹಾರ್ ಜೈಲು ಸೇರುವಂತಾಯಿತು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಹಾಗೂ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಹಲವಾರು ಭ್ರಷ್ಟಾಚಾರ ಪ್ರಕರಣಗಳ ಆರೋಪವನ್ನು ಎದುರಿಸುತ್ತಿದ್ದಾರೆ. ಅವರಿಗೆ ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು ನಿಶ್ಚಿತ ಎಂದು ದೂರಿದರು.

ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯವು ಶಿವಕುಮಾರ್‌ಗೆ ಜಾಮೀನು ಮಂಜೂರು ಮಾಡದೇ ಇರುವುದು ಸ್ವಾಗತಾರ್ಹ ಕ್ರಮ. ಶಿವಕುಮಾರ್ ಮಾಡಿರುವ ಭ್ರಷ್ಟಾಚಾರದಲ್ಲಿ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ ಪಾತ್ರವು ಇದೆ ಎಂದು ಹಿರೇಮಠ್ ಆರೋಪಿಸಿದರು.

ಡಿ.ಕೆ.ಶಿವಕುಮಾರ್ ತಮ್ಮ ಮಗಳ ಹೆಸರಿನಲ್ಲಿ 108 ಕೋಟಿ ರೂ.ಗಳ ಆಸ್ತಿ ಮಾಡಿ, ಆಕೆಯ ಭವಿಷ್ಯವನ್ನು ಹಾಳು ಮಾಡಿದ್ದಾರೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯನ್ನು ಕಾಂಗ್ರೆಸ್ ಪಕ್ಷ ದ್ವೇಷದ ರಾಜಕಾರಣ ಎಂದು ಆರೋಪಿಸುತ್ತಿದೆ. ಆದರೆ, ಭ್ರಷ್ಟ ರಾಜಕಾರಣಿಗಳ ವಿರುದ್ಧ ತನಿಖೆ ನಡೆಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್, ಬೆನ್ನಿಗಾನಹಳ್ಳಿಯಲ್ಲಿ 4.20 ಎಕರೆ ಭೂಮಿಯನ್ನು ಕಾನೂನು ಬಾಹಿರವಾಗಿ ಡಿನೋಟಿಫಿಕೇಷನ್ ಮಾಡಿಕೊಂಡಿದ್ದಾರೆ ಎಂದು ಹಿರೇಮಠ್ ಆರೋಪಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ 474 ಪುಟಗಳ ವಿಶೇಷ ಅರ್ಜಿಯನ್ನು ದಾಖಲಿಸಲಾಗಿದೆ. ಅಲ್ಲದೇ, ಈ ಎಲ್ಲ ದಾಖಲೆಗಳನ್ನು ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಗೂ ಹಸ್ತಾಂತರಿಸಲಾಗುವುದು ಎಂದು ಹಿರೇಮಠ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News