ಪ್ರತಾಪ್ ಸಿಂಹ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಒತ್ತಾಯಿಸಿ ದಸಂಸ ಧರಣಿ

Update: 2019-09-28 16:44 GMT

ಮೈಸೂರು,ಸೆ.28: ಸಂಸದ ಪ್ರತಾಪ್ ಸಿಂಹ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ನಡೆಸುತ್ತಿದ್ದು ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಮೈಸೂರು ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಶನಿವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಮಡಿಕೇರಿಯಲ್ಲಿ ಟಿಪ್ಪು ಹೆಸರಿನಲ್ಲಿ ದ್ವೇಷ ಬಿತ್ತಿ ಹನುಮ ಜಯಂತಿಯ ನೆಪದಲ್ಲಿ ಹುಣಸೂರಿನಲ್ಲಿ ಗಲಭೆ ಎಬ್ಬಿಸಿದ್ದರು. 2ನೇ ಬಾರಿ ಆಯ್ಕೆಗೊಂಡ ಮೇಲೆ ಮೈಸೂರನ್ನು ಅವಮಾನಿಸಲು ಹೊರಟಿದ್ದಾರೆ. ರಾಜಕೀಯ ಅಧಿಕಾರ ದುರುಪಯೋಗಪಡಿಸಿಕೊಂಡು ನಾಡದೊರೆ ಮಹಿಷನನ್ನು ಕೀಳಾಗಿ ನೋಡುವುದರ ಮೂಲಕ ಮಹಿಷ ವಂಶಸ್ಥರನ್ನು ಹೀಯಾಳಿಸಿದ್ದಾರೆ. ಬಹುಸಂಖ್ಯಾತರಾಗಿ ಈಗಲೂ ಮಹಿಷನ ಹೆಸರಿನಲ್ಲಿ ದಸರಾ ಸಂದರ್ಭದಲ್ಲಿ ಪಿತೃಪಕ್ಷ ಆಚರಣೆ ಮಾಡುವ ಬಹುದೊಡ್ಡ ಸಮುದಾಯದ ಆಚರಣೆಯನ್ನೇ ಪರ್ಯಾಯ ಆಚರಣೆ ಎಂಬಂತೆ ಬಿಂಬಿಸಿ ಹಬ್ಬದ ಆಚರಣೆಗೆ ಅಡ್ಡಿಪಡಿಸಿ ಜನರ ಸಂವಿಧಾನಾತ್ಮಕ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್, ಚೋರನಹಳ್ಳಿ ಶಿವಣ್ಣ, ಎಡೆದೊರೆ ಮಹದೇವಯ್ಯ, ಕೆ.ವಿ.ದೇವೇಂದ್ರ, ಜಗದೀಶ್, ಚಿಕ್ಕಜವರಪ್ಪ, ಸೋಮಯ್ಯ, ದೇವೇಂದ್ರ, ನಟರಾಜ, ನಂದೀಶ್ ದೂರ, ಕಾಂತರಾಜು, ಮಹದೇವಸ್ವಾಮಿ, ಸೋಮಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

ಮೈಸೂರು: ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಯುವ ದಸರಾ ಪತ್ರಿಕಾಗೋಷ್ಠಿ ನಡೆಸಿ ಹೊರಹೋಗುವ ಸಂದರ್ಭದಲ್ಲಿ ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವಿರುದ್ಧ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ದಲಿತ ಸಂಘರ್ಷ ಸಮಿತಿಯವರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಯುವ ದಸರಾ ಪತ್ರಿಕಾಗೋಷ್ಠಿ ಮುಗಿಸಿ ಕಾರು ಹತ್ತಲು ಹೋದ ಸೋಮಣ್ಣ ಅವರನ್ನು ಕಂಡ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಧಿಕ್ಕಾರ ಕೂಗಿ, ಹೇಡಿ ಸಂಸದ ಪ್ರತಾಪ್ ಸಿಂಹನನ್ನು ಬಂಧಿಸಿ ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News