ರಾಜಕೀಯವಾಗಿ ಬಿಎಸ್‌ವೈ ಮುಗಿಸಲು ಬಿಜೆಪಿ ಷಡ್ಯಂತ್ರ: ಆರ್.ಬಿ.ತಿಮ್ಮಾಪುರ್
ಬಾಗಲಕೋಟೆ, ಸೆ.28: ರಾಜಕೀಯವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಮುಗಿಸಲು ಬಿಜೆಪಿ ಪಕ್ಷದಲ್ಲಿಯೇ ಷಡ್ಯಂತ್ರ ರಚಿಸಲಾಗುತ್ತಿದೆ ಎಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪುರ್ ಆರೋಪಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಪಕ್ಷೀಯರ ಸಂಚಿಗೆ ಸಿಲುಕಿ ಅಸಹಾಯಕರಾಗಿರುವ ಯಡಿಯೂರಪ್ಪ, ಏನು ಮಾಡಲಾಗದಂತಹ ಸ್ಥಿತಿಯಲ್ಲಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿಕೊಂಡು ಪ್ರಬಲ ಲಿಂಗಾಯತ ಸಮುದಾಯದ ನಾಯಕರಾಗಿರುವ ಯಡಿಯೂರಪ್ಪ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಅವರು ದೂರಿದರು.
ಚುನಾವಣೆಗಳಲ್ಲಿ ಲಿಂಗಾಯತ ಸಮುದಾಯದವರು ಯಡಿಯೂರಪ್ಪ ಮುಖ ನೋಡಿ ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆಯೇ ಹೊರತು, ನಳೀನ್ ಕುಮಾರ್ ಕಟೀಲ್ ಆಗಲಿ, ಸಂತೋಷ್ ಮುಖ ನೋಡಿ ಮತ ಹಾಕಿಲ್ಲ. ನಳೀನ್ ಕುಮಾರ್ ಕಟೀಲ್‌ಗೆ ಉತ್ತರ ಕರ್ನಾಟಕ ಭಾಗದ ಪರಿಚಯವೇ ಇಲ್ಲ ಎಂದು ಅವರು ಟೀಕಿಸಿದರು.
ಯಡಿಯೂರಪ್ಪಗೆ ಸ್ವತಂತ್ರವಾಗಿ ಆಡಳಿತ ನಡೆಸಲು ಅವಕಾಶ ನೀಡದಿರಲು ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಗಿದೆ. ಇನ್ನೆರಡು ತಿಂಗಳಲ್ಲಿ ಯಡಿಯೂರಪ್ಪನವರ ರಾಜಕೀಯ ಜೀವನ ಅಂತ್ಯಗೊಳ್ಳುವ ಸಾಧ್ಯತೆಯಿದೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಟಿಕೆಟ್ ಕೂಡ ಸಿಗುವುದಿಲ್ಲ ಎಂದು ತಿಮ್ಮಾಪುರ್ ಹೇಳಿದರು.
56 ಇಂಚಿನ ಎದೆ ಇದೆ ಎಂದು ಬಿಂಬಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯ ಹೃದಯಲ್ಲಿ ನಮ್ಮ ರಾಜ್ಯಕ್ಕೆ ಒಂದಿಂಚೂ ಜಾಗವಿಲ್ಲ. 25 ಮಂದಿ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿರುವ ರಾಜ್ಯಕ್ಕೆ ಅವರು ಕೊಟ್ಟಿರುವ ಸ್ಥಾನಮಾನ ಇದು. ರಾಜ್ಯದ ಪರವಾಗಿ ಪ್ರಧಾನಿ ಎದುರು ಧ್ವನಿ ಎತ್ತಲು ಈ ಸಂಸದರಿಗೆ ಬಾಯಿಯೇ ಇಲ್ಲ ಎಂದು ಅವರು ಹೇಳಿದರು.
ಆರ್.ಬಿ.ತಿಮ್ಮಾಪುರ್ ತಮ್ಮ ಪಕ್ಷದ ಒಳ ಜಗಳದ ಬಗ್ಗೆ ವಿಚಾರ ಮಾಡಲಿ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಪ್ರಬಲವಾದ ನಾಯಕತ್ವವನ್ನು ಹೊಂದಿದೆ. ರಾಷ್ಟ್ರೀಯ ನಾಯಕರ ಮಾರ್ಗದರ್ಶನದಂತೆ ರಾಜ್ಯ ಘಟಕ ಕೆಲಸ ಮಾಡುತ್ತದೆ. ಯಡಿಯೂರಪ್ಪ ಮುಂದಿನ ಮೂರುವರೆ ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ.
-ಸಿ.ಸಿ.ಪಾಟೀಲ್, ಗಣಿ ಮತ್ತು ಭೂ ವಿಜ್ಞಾನ ಸಚಿವ