ಉಪ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧ: ಜಗದೀಶ್ ಶೆಟ್ಟರ್

Update: 2019-09-28 17:10 GMT

ಹುಬ್ಬಳ್ಳಿ, ಸೆ.28: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗವು ಘೋಷಿಸಿರುವ ಉಪ ಚುನಾವಣೆಯನ್ನು ಎದುರಿಸಲು ಬಿಜೆಪಿ ಸಿದ್ಧವಾಗಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರಿಗೆ ಸಂಬಂಧಿಸಿದ ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಪ್ರಕರಣ ಇತ್ಯರ್ಥಗೊಂಡ ಬಳಿಕ ಚುನಾವಣಾ ಆಯೋಗ ಉಪ ಚುನಾವಣೆಯ ದಿನಾಂಕವನ್ನು ಘೋಷಿಸಬೇಕಿತ್ತು ಎಂದರು.

ನೆರೆ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡುವುದರಲ್ಲಿ ಯಾವುದೇ ಬಗೆಯ ವಿಳಂಬವಾಗಿಲ್ಲ. ಕೇಂದ್ರ ಸರಕಾರದಿಂದ ನಮಗೆ ನೆರವು ಬರುವುದು ಸ್ವಲ್ಪ ತಡವಾಗಿದೆ ಅಷ್ಟೇ. ಆದರೆ, ರಾಜ್ಯ ಸರಕಾರ ಈಗಾಗಲೇ ಒಂದು ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಖಾತೆಗೆ ಹಣ ಜಮೆ ಮಾಡಲಾಗಿದೆ. ನೆರೆ ಹಾಗೂ ಪ್ರವಾಹದಿಂದ ಮನೆಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿರುವವರಿಗೆ ಆರಂಭದಲ್ಲಿ ಒಂದು ಲಕ್ಷ ರೂ.ಪರಿಹಾರ ನೀಡಲಾಗುತ್ತಿದೆ. 5 ಲಕ್ಷ ರೂ.ವೆಚ್ಚದಲ್ಲಿ ಹೊಸ ಮನೆಗಳನ್ನು ಕಟ್ಟಿಸಿಕೊಡಲಾಗುತ್ತಿದೆ ಎಂದು ಅವರು ಹೇಳಿದರು.

ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಲು ಮುಂದಾಗಿರುವ ರಾಜ್ಯ ಸರಕಾರದ ಕ್ರಮಕ್ಕೆ ಆಡಳಿತ ಪಕ್ಷದ ಶಾಸಕರಿಂದಲೇ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಗಳ ವಿಭಜನೆಯ ಸಂದರ್ಭದಲ್ಲಿ ಈ ರೀತಿಯ ಅಸಮಾಧಾನಗಳು ಎದುರಾಗುವುದು ಸಹಜ. ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚಿಸಿ, ಒಪ್ಪಿಗೆ ಪಡೆದ ಬಳಿಕವಷ್ಟೇ ನೂತನ ಜಿಲ್ಲೆ ರಚನೆಯ ನಿರ್ಧಾರ ಹೊರಬೀಳುತ್ತದೆ ಎಂದರು.

ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಆಕ್ಷೇಪಾರ್ಹ ಹಾಗೂ ನಿಂದನಾತ್ಮಕ ಪದ ಬಳಸಿರುವ ಕುರಿತು ಕೇಳಿ ಬರುತ್ತಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಆದರೂ, ಯಾರು ಮಾತನಾಡಿದ್ದಾರೋ ಅವರೇ ಈಗಾಗಲೇ ಸ್ಪಷ್ಟಣೆ ನೀಡಿರುವುದರಿಂದ, ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News