ನಾಲ್ಕೈದು ದಿನಗಳಲ್ಲಿ ಔರಾದ್ಕರ್ ವರದಿ ಜಾರಿ: ಮುಖ್ಯಮಂತ್ರಿ ಯಡಿಯೂರಪ್ಪ
ಮೈಸೂರು,ಸೆ.28: ಇನ್ನು ನಾಲ್ಕೈದು ದಿನಗಳಲ್ಲಿ ಔರಾದ್ಕರ್ ವರದಿ ಕುರಿತಂತೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ದಸರಾ ಉದ್ಘಾಟಕರಾದ ಸಾಹಿತಿ ಎಸ್.ಎಲ್.ಬೈರಪ್ಪ ಅವರ ಕುವೆಂಪು ನಗರದಲ್ಲಿರುವ ಅವರ ಮನೆಗೆ ಶನಿವಾರ ಭೇಟಿ ನೀಡಿ ದಸರಾ ಉದ್ಘಾಟನೆಗೆ ಆಹ್ವಾನಿಸಿದ ನಂತರ ಮಾಧ್ಯಮದವರೊಂದಿತೆ ಮಾತನಾಡಿದರು.
ಔರಾದ್ಕರ್ ವರದಿಯನ್ನು ಆದಷ್ಟು ಬೇಗ ಜಾರಿಗೆ ತರುತ್ತೇವೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಐದಾರು ದಿನದಲ್ಲಿ ಅವರಿಗೆ ನ್ಯಾಯ ಕೊಡಿಸುವ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದರು.
ಸಚಿವ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಉಳಿದೆಲ್ಲಾ ಸ್ಥಳೀಯ ಶಾಸಕ, ಸಂಸದರ ನೇತೃತ್ವದಲ್ಲಿ ಬಹಳ ಅದ್ಧೂರಿಯಾಗಿ ದಸರಾ ವ್ಯವಸ್ಥೆ ಮಾಡಿದ್ದಾರೆ. ದೀಪಾಲಂಕಾರ ನೋಡಿಯೇ ಸುಸ್ತಾಗಿದ್ದೇನೆ. ಚಾಮುಂಡಿ ಬೆಟ್ಟದಲ್ಲಿ ತಾಯಿ ದರ್ಶನಕ್ಕೆ ನಾಳೆ ಹೋಗುತ್ತಿದ್ದೇನೆ. ಬಹಳ ಸುಂದರವಾದ ವಾತಾವರಣದಲ್ಲಿ ಅಲ್ಲಿನ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದು ಹೇಳಿದರು.
ಎಸ್.ಎಲ್.ಬೈರಪ್ಪರನ್ನು ಭೇಟಿ ಮಾಡಿ ಸುದೀರ್ಘವಾಗಿ ಚರ್ಚಿಸಿದ್ದು, ಅನೇಕ ಪ್ರಮುಖ ಸಂಗತಿ, ಸಲಹೆಗಳನ್ನು ನೀಡಿದ್ದಾರೆ. ಕನ್ನಡವನ್ನು ಉಳಿಸಬೇಕು, ಇಂಗ್ಲೀಷ್ ಕಾರಣಕ್ಕಾಗಿ ಕನ್ನಡಕ್ಕೆ ಹಿನ್ನಡೆಯಾಗಬಾರದು ಎಂದು ಅವರದೇ ಆದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಅನೇಕ ವಿಷಯಗಳ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ ಎಂದರು.
ಎಸ್.ಎಲ್.ಬೈರಪ್ಪರಂತಹ ಹಿರಿಯ ವ್ಯಕ್ತಿ ಇಂದು ದಸರಾ ಉದ್ಘಾಟಿಸುತ್ತಿರುವುದು ಈ ನಾಡಿನ ಆರೂವರೆ ಕೋಟಿ ಜನರಿಗೂ ಸಿಗುತ್ತಿರುವ ದೊಡ್ಡ ಗೌರವ ಎಂದು ಭಾವಿಸಿದ್ದೇನೆ. ದಸರಾ ಅವರ ಕೈಯಿಂದ ಉದ್ಘಾಟಿಸಬೇಕೆಂದು ಅನೇಕ ವರ್ಷಗಳಿಂದ ನಮ್ಮ ಅಪೇಕ್ಷೆ ಇತ್ತು. ನಾಳೆ ಬೆಳಗ್ಗೆ ಅವರು ದಸರಾ ಉದ್ಘಾಟಿಸುತ್ತಿದ್ದಾರೆ. ಅವರ ಮಾತುಗಳನ್ನು ಕೇಳುವ ಅವಕಾಶ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾನೆ ಎಂದರು.
ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಬಿಜೆಪಿ ಪ್ರಾತಿನಿದ್ಯ ನೀಡುವ ಕುರಿತ ಪ್ರಶ್ನೆಗೆ, ಈ ಸಂಬಂಧ ಪಕ್ಷದ ಅಧ್ಯಕ್ಷರು, ಮುಖಂಡರೆಲ್ಲರೂ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಸಿದ್ದರಾಮಯ್ಯರ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎಂಬ ಮಾತಿಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ವಿಚಲಿತರಾಗಿ ಏನು ಬೇಕಾದರೂ ಮಾತನಾಡಬಹುದು. ಚುನಾವಣಾ ಆಯೋಗ ತಮ್ಮದೇ ಆದಂತಹ ಒಂದು ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ. ಅದನ್ನು ನಾಡಿನ ದೇಶದ ಜನ ಸ್ವಾಗತ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಯಾಕೆ ಆ ರೀತಿ ಹೇಳಿಕೆ ನೀಡಿದ್ದಾರೆಂಬುದು ಗೊತ್ತಿಲ್ಲ ಎಂದರು.
ಪ್ರವಾಸಿಗರಿಗೆ ಆಹ್ವಾನಿಸುವ ಕುರಿತು ಮಾತನಾಡಿ, ಈಗಾಗಲೇ ಹೆಚ್ಚು ಒತ್ತು ನೀಡಿ ಎಲ್ಲರನ್ನೂ ಆಹ್ವಾನಿಸಿದ್ದೇವೆ. ಈ ಬಾರಿ ನಿಮ್ಮೆಲ್ಲರ ನಿರೀಕ್ಷೆಗೂ ಮೀರಿ ದಸರಾದಲ್ಲಿ ಭಾಗವಹಿಸುತ್ತಾರೆ. ದಸರಾ ಪ್ರಾಧಿಕಾರ ಕುರಿತು ಈ ಬಗ್ಗೆ ಮುಂದೆ ಮಾತನಾಡುವುದಾಗಿ ತಿಳಿಸಿದರು.
ಇದೇ ವೇಳೆ ಎಸ್.ಎಲ್.ಬೈರಪ್ಪ ಅವರನ್ನು ಮೈಸೂರು ಪೇಟ ತೊಡಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಅರ್ಧತಾಸಿಗೂ ಹೆಚ್ಚುಕಾಲ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಇನ್ನಿತರರು ಉಪಸ್ಥಿತರಿದ್ದರು.