ಮಹಿಷ ದಸರಾ ಸಮಿತಿಯವರ ಜೊತೆ ಮಾತನಾಡುವ ಪ್ರಶ್ನೆಯೇ ಇಲ್ಲ: ಸಚಿವ ವಿ.ಸೋಮಣ್ಣ

Update: 2019-09-28 18:07 GMT

ಮೈಸೂರು,ಸೆ.28: ಮೈಸೂರು ದಸರಾ ಉದ್ಘಾಟನೆ ವೇಳೆ ಕಪ್ಪು ಭಾವುಟ ಪ್ರದರ್ಶನ ಮಾಡುವುದಾಗಿ ಹೇಳಿರುವ ಮಹಿಷ ದಸರಾ ಸಮಿತಿಯವರನ್ನು ಕರೆದು ಮಾತನಾಡುವ ಪ್ರಶ್ನೆಯೇ ಇಲ್ಲ ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಖಾರವಾಗಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಯುವ ದಸರಾ, ಹಾಗೂ ಯೋಗ ದಸರಾ ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಮಹಿಷ ದಸರಾಗೆ ಅಡ್ಡಿಪಡಿಸಿರುವುದರಿಂದ ನಾಡ ಹಬ್ಬ ಮೈಸೂರು ದಸರಾ ವೇಳೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಹೇಳಿರುವ ಮಹಿಷ ದಸರಾ ಆಚರಣಾ ಸಮಿತಿಯವರು, ಪ್ರಗತಿಪರರು, ದಲಿತರು, ಮೂಲನಿವಾಸಿಗಳು ಮತ್ತು ಸಾಹಿತಿಗಳನ್ನು ಕರೆದು ಮಾತನಾಡುತ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ, ಇದು ಮೈಸೂರು ದಸರಾ. ಅಡ್ಡಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ, ಎಲ್ಲವನ್ನೂ ಬೆಟ್ಟದ ತಾಯಿ ಶ್ರೀ ಚಾಮುಂಡೇಶ್ವರಿ ನೋಡಿಕೊಳ್ಳಲಿದ್ದಾರೆ ಎಂದು ಹೇಳಿದರು.

ನಾನು ನಲವತ್ತು ವರ್ಷ ರಾಜಕಾರಣ ಮಾಡಿರುವವನು. ಇಂತಹ ಹಲವಾರು ಘಟನೆಗಳನ್ನು ಎದುರಿಸಿದ್ದೇನೆ. ನಾನು ಯಾರನ್ನೂ ದ್ವೇಷಿಸುತ್ತಿಲ್ಲ, ಆದರೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ. ತಾಯಿ ಶ್ರೀಚಾಮುಂಡೇಶ್ವರಿ ಆಶೀರ್ವಾದ ಇರುವವರೆಗೂ ನಮಗೆ ಯಾವುದೇ ರೀತಿಯಲ್ಲಿ ತೊಂದರೆ ಯಾಗುವುದಿಲ್ಲ. ಈಗ ಯಾರು ವಿರೋಧ ಮಾಡುತ್ತಿದ್ದಾರೊ ಅವರು ಅ.8ರ ನಂತರ ಬರಲಿ ಆಗ ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

ಸ್ವಪಕ್ಷೀಯರ ಅಸಮಾಧಾನ ಮತ್ತು ಪ್ರಗತಿಪರರಿಂದ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಇದು ದೇವಿ ಕಾರ್ಯ. ಯಾವುದೇ ವಿಘ್ನವಿಲ್ಲದೇ ಯಶಸ್ವಿಯಾಗಿ ನಡೆಯಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ದಸರಾ ಯಶಸ್ವಿಯಾಗಿ ಸಂಘಟಿಸಬೇಕೆಂದು ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರ ಪಡೆದು 30 ದಿನಗಳಿಂದ ಶ್ರಮಿಸಿದ್ದೇನೆ. 10 ದಿನಗಳ ದಸರಾ ಯಶಸ್ವಿಯಾಗಿ ನಡೆಯುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News