ಮೋದಿ ರಾಷ್ಟ್ರಪಿತ ಎನ್ನುವುದು ಹಾಸ್ಯಾಸ್ಪದ: ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್

Update: 2019-09-29 11:49 GMT

ದಾವಣಗೆರೆ, ಸೆ.29: ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾತ್ಮ ಗಾಂಧೀಜಿಯವರು ಮಾತ್ರ ದೇಶದ ರಾಷ್ಟ್ರಪಿತರಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರಪಿತರಾಗಿದ್ದಾರೆಂಬ ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್‍ರವರ ಬಣ್ಣನೆಗೆ ಇದೊಂದು ಹಾಸ್ಯಾಸ್ಪದ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.  

ದೇಶಕ್ಕಾಗಿ ತುಂಡುಡುಗೆ ತೊಟ್ಟ, ಅರೆ ಬೆತ್ತಲ ಫಕೀರ ಗಾಂಧೀಜಿಯವರಿಗೆ 10 ಲಕ್ಷ ರೂಪಾಯಿ ಮೌಲ್ಯದ ಸೂಟ್, ಬೂಟಿನ ನರೇಂದ್ರ ಮೋದಿ ಹೋಲಿಕೆ ಮಾಡಿರುವುದು ಶತಮಾನದ ದೊಡ್ಡ ಜೋಕ್. ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರಿಗೆ ಮೋದಿಯನ್ನು ಹೋಲಿಕೆ ಮಾಡಿರುವುದನ್ನು ದೇಶದ ಯಾವೊಬ್ಬ ಪ್ರಜೆಯು ಒಪ್ಪಲಾರರೆಂದು ಡಿ. ಬಸವರಾಜ್ ಅಭಿಪ್ರಾಯ ಪಟ್ಟಿದ್ದಾರೆ.  

ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್‍ ವಿವಾದಾತ್ಮಕ ವ್ಯಕ್ತಿ. ಕೆಲವೊಮ್ಮೆ ಸುಳ್ಳು ಹೇಳಿಕೆಗಳನ್ನು ನೀಡುವುದಕ್ಕೆ ಜಗತ್ ಪ್ರಸಿದ್ಧರಾಗಿದ್ದಾರೆ. ಮೋದಿಯವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೋದಿಯವರು ಟ್ರಂಪ್ ಪಕ್ಕದಲ್ಲಿದ್ದಾಗ ಭಾರತ ದೇಶದ ಪರ ಹೇಳಿಕೆ ನೀಡಿದ ಟ್ರಂಪ್‍, ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಪಕ್ಕದಲ್ಲಿದ್ದಾಗ ಪಾಕಿಸ್ತಾನದ ಪರ ಹೇಳಿಕೆ ನೀಡಿದ್ದರು. ಇಂತಹ ವ್ಯಕ್ತಿ ರಾಷ್ಟ್ರಪಿತ ಬಿರುದು ನೀಡಿರುವುದಕ್ಕೆ ಕವಡೆ ಕಾಸಿನ ಕಿಮ್ಮತ್ತು ಭಾರತೀಯರು ನೀಡುವುದಿಲ್ಲವೆಂದು ಕುಟುಕಿದ್ದಾರೆ. 

ಮೋದಿ ಸಮಯ ಸಂದರ್ಭ ನೋಡಿ ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ, ಬುದ್ಧ, ಬಸವ, ಡಾ. ಅಂಬೇಡ್ಕರ್ ಮತ್ತು ಭಗತ್‍ಸಿಂಗ್ ಸೇರಿದಂತೆ ರಾಷ್ಟ್ರ ನಾಯಕರ ಪಾತ್ರಗಳನ್ನು ಮಕ್ಕಳು ವೇಷಭೂಷಣ ಸ್ಪರ್ಧೆಯಲ್ಲಿ ನಟಿಸಿದಂತೆ ಲೀಲಜಾಲವಾಗಿ ಅಭಿನಯಿಸುತ್ತಾರೆಂದು ಅವರು ವ್ಯಂಗವಾಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News