'ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ': ಅನರ್ಹ ಶಾಸಕರ ಬಗ್ಗೆ ಬಿಜೆಪಿ ಶಾಸಕ ಉಮೇಶ್ ಕತ್ತಿ

Update: 2019-09-29 11:57 GMT

ಬೆಳಗಾವಿ, ಸೆ. 29: ಬಿಜೆಪಿ ನೇತೃತ್ವದ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣಕರ್ತರಾದ ‘ಅನರ್ಹ ಶಾಸಕರ’ ವಿರುದ್ಧವೇ ಬಿಜೆಪಿ ಮುಖಂಡರು ಹೇಳಿಕೆಗಳನ್ನು ನೀಡುತ್ತಿದ್ದು, ಇದೀಗ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ, ‘ಅನರ್ಹ ಶಾಸಕರಿಗೆ ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ’ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ರವಿವಾರ ಹುಕ್ಕೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕರ ರಾಜೀನಾಮೆಯಿಂದ ಜಿಲ್ಲೆಯಲ್ಲಿ ತೆರವಾಗಿರುವ ಮೂರು ಕ್ಷೇತ್ರಗಳಲ್ಲಿ ಬಿಜೆಪಿಯವರಿಗೆ ಟಿಕೆಟ್ ದೊರೆಯಲಿದೆ ಎಂದು ಅನರ್ಹ ಶಾಸಕರಿಗೆ ತಿರುಗೇಟು ನೀಡಿದರು.

ಜಿಲ್ಲೆಯ ಕಾಗವಾಡ, ಅಥಣಿ, ಗೋಕಾಕ್ ಮೂರು ಕ್ಷೇತ್ರಗಳ ಉಪಚುನಾವಣೆಗೆ ನಮ್ಮ ಪಕ್ಷದ ಅಭ್ಯರ್ಥಿಗಳೇ ಕಣಕ್ಕಿಳಿಯಲಿದ್ದಾರೆ. ಅಥಣಿಯಿಂದ ಲಕ್ಷ್ಮಣ ಸವದಿ, ಕಾಗವಾಡದಿಂದ ರಾಜು ಕಾಗೆ ಹಾಗೂ ಗೋಕಾಕ್‌ನಿಂದ ಅಶೋಕ್ ಪೂಜಾರಿ ಕಣಕ್ಕಿಳಿಯಲಿದ್ದಾರೆ ಎಂದು ಉಮೇಶ್ ಕತ್ತಿ ಪ್ರಕಟಿಸಿದರು.

ಮಾಜಿ ಶಾಸಕ ರಾಜು ಕಾಗೆಯವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಅವರು ಬಿಜೆಪಿಯಲ್ಲೇ ಇರುತ್ತಾರೆ. ಉಪ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂದ ಅವರು, ನಾನೀಗ ಶಾಸಕ ಅಷ್ಟೆ. ನೆರೆ ಪರಿಹಾರ ನೋಡಿಕೊಳ್ಳಲು ನನ್ನನ್ನು ಶಾಸಕನಾಗಿ ಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ನೆರೆ ಸಂತ್ರಸ್ತರಿಗೆ ಸರಿಯಾದ ಪರಿಹಾರ ನೀಡದಿದ್ದರೆ ನಾವು ಸರಕಾರದ ವಿರುದ್ಧ ದನಿ ಎತ್ತಬೇಕಾಗುತ್ತದೆ ಎಂದ ಅವರು, ಕೇಂದ್ರ ಸರಕಾರ ಶೀಘ್ರದಲ್ಲೆ ಪರಿಹಾರ ಪ್ರಕಟಿಸಲಿದೆ ಎಂದರು. ಈ ವೇಳೆ ಮೇಲ್ಮನೆ ಸದಸ್ಯ ಎಂ.ಸಿ.ವೇಣುಗೋಪಾಲ್ ಹಾಜರಿದ್ದರು.

‘ಉಮೇಶ್ ಕತ್ತಿ ಎಂಟು ಬಾರಿ ಶಾಸಕರಾಗಿದ್ದು, ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆಗಳಿವೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದು, ಅವರನ್ನು ಮಂತ್ರಿ ಮಾಡಿ ಅವರ ಅನುಭವ ಪಡೆಯಬೇಕಿತ್ತು. ಆದರೆ, ಈ ಸರಕಾರ ಅವರಿಗೆ ಸಚಿವ ಸ್ಥಾನ ನೀಡಿಲ್ಲ’

-ಎಂ.ಸಿ.ವೇಣುಗೋಪಾಲ್, ಮೇಲ್ಮನೆ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News