ರಾಜಕೀಯ ನಾಯಕರ ಹೇಳಿಕೆಗಳು ಸಹಿಸಲಾಗದ ನೋವುಂಟು ಮಾಡಿವೆ: ಕುಮಾರಸ್ವಾಮಿ

Update: 2019-09-29 13:34 GMT

ಬೆಂಗಳೂರು, ಸೆ. 29: ‘ನನ್ನ ಅಧಿಕಾರವಧಿಯಲ್ಲಿ ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ಟೆಲಿಫೋನ್ ಟ್ಯಾಪಿಂಗ್ ನಡೆದಿತ್ತು ಎಂಬ ವರದಿಗಳು, ಅದಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಹೇಳಿಕೆಗಳು ನನ್ನ ಹೃದಯದಲ್ಲಿ ಸಹಿಸಲಾಗದ ನೋವುಂಟು ಮಾಡಿವೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ‘ಎಲ್ಲಕ್ಕೂ ಮಿಗಿಲಾಗಿ ಸ್ವಾಮೀಜಿಗಳಲ್ಲಿ ಮೂಡಿರಬಹುದಾದ ಬೇಸರ ನನ್ನ ನೋವನ್ನು ಹೆಚ್ಚಿಸಿದೆ. ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರು ಪ್ರಸ್ತಾಪಿಸಲಾಗಿದೆ. ಸಂಭವಿಸದ ತಪ್ಪೊಂದಕ್ಕೆ ಸಚಿವ ಆರ್.ಅಶೋಕ್ ಅವರು ಎಲ್ಲರಿಗಿಂತಲೂ ಮುಂದೆ ಹೋಗಿ ಕ್ಷಮೆ ಕೇಳಿದ್ದಾರೆ. ಇದರಿಂದ ಅವರಿಗೇನು ಲಾಭವೋ ಗೊತ್ತಿಲ್ಲ. ಅವರ ಆತುರಕ್ಕೆ ಮರುಕವಿದೆ. ಅದೇ ಹೊತ್ತಲ್ಲೇ ಶ್ರೀಗಳಿಗಾಗುತ್ತಿರುವ ಬೇಸರಕ್ಕೆ ಅತೀವ ನೋವಿದೆ. ನಿರ್ಮಲಾನಂದ ನಾಥ ಸ್ವಾಮೀಜಿಗಳು ನನಗೆ ನೈತಿಕ ಬಲವಾಗಿದ್ದವರು, ತಮ್ಮ ಸಾಮಾಜಿಕ ಕಾರ್ಯಗಳ ನೆರಳಲ್ಲಿ ನನಗೆ ಮಾರ್ಗದರ್ಶನ ಮಾಡಿದವರು, ನನಗಾಗಿ ಕಾಲಭೈರವನಲ್ಲಿ ಪ್ರಾರ್ಥಿಸಿದವರು. ಅವರ ವಿಚಾರದಲ್ಲಿ ನಾನು ಅನುಮಾನದ ನಡೆ ಅನುಸರಿಸಲು ಸಾಧ್ಯವೇ? ಖಂಡಿತ ಇಲ್ಲ’ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

‘ಸ್ವಾರ್ಥ, ಅಧಿಕಾರಕ್ಕಾಗಿ ಎಷ್ಟು ಕೀಳುಮಟ್ಟಕ್ಕೆ ಇಳಿಯಬಹುದು ಎನ್ನುವುದರಲ್ಲಿ ಕುಮಾರಸ್ವಾಮಿಯವರಿಗೆ ಸರಿಸಾಟಿಯಿಲ್ಲ. ಇಡೀ ದೇಶವೇ ಗೌರವಿಸುವ ಶ್ರೀಗಳ ಫೋನ್ ಕದ್ದಾಲಿಸಿದ್ದು ಮಾತ್ರವಲ್ಲದೆ, ಸ್ಮಗ್ಲರ್‌ಗಳ ಪಟ್ಟಿಯಲ್ಲಿ ಸೇರಿಸಿ, ಅಕ್ಷಮ್ಯ ಅಪರಾಧ ಎಸಗಿದ್ದಾರೆ. ಅವರಲ್ಲಿ ಸ್ವಲ್ಪವಾದರೂ ನೈತಿಕತೆ ಉಳಿದಿದ್ದರೆ ಮೊದಲು ಗುರುಗಳ ಕ್ಷಮೆ ಕೇಳಲಿ’

-ವಿಜಯೇಂದ್ರ, ಬಿಎಸ್‌ವೈ ಪುತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News