ಉಪ ಚುನಾವಣೆ ಬಳಿಕ ಬಿಜೆಪಿ ಸರಕಾರ ಪತನ, ಕಾಂಗ್ರೆಸ್ ಗೆ ಅಧಿಕಾರ: ಸಿದ್ದರಾಮಯ್ಯ

Update: 2019-09-29 14:26 GMT

ಕಲಬುರಗಿ, ಸೆ.29: ಉಪ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಸರಕಾರ ಪತನವಾಗಲಿದ್ದು, ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದರು.

ರವಿವಾರ ಕಲಬುರಗಿ ನಗರದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಕಲಬುರಗಿ ಜಿಲ್ಲಾ ಘಟಕ ಹಾಗೂ ಕುರುಬ ಗೊಂಡ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದ್ದು, ಫಲಿತಾಂಶ ಪ್ರಕಟಗೊಂಡ ಕೆಲವೇ ಸಮಯದಲ್ಲಿ ಬಿಜೆಪಿ ಸರಕಾರ ಅಧಿಕಾರ ಕಳೆದುಕೊಳ್ಳಲಿದೆ ಎಂದರು.

ಅನರ್ಹ ಶಾಸಕರಿಗೆ ಅನುಕೂಲವಾಗಲೆಂದೇ ಚುನಾವಣೆಯನ್ನು 65 ದಿನ ಮುಂಚಿತವಾಗಿ ಘೋಷಿಸಲಾಗಿದೆ. ಮೊದಲು ಚುನಾವಣೆ ಘೋಷಣೆ ಮಾಡಿದ ಆಯೋಗ ನಂತರ ರದ್ದು ಮಾಡಿತು. ಇದೀಗ ಏಕಾಏಕಿ ಮತ್ತೆ ಉಪ ಚುನಾವಣೆ ದಿನಾಂಕ ಘೋಷಿಸಿದೆ. ಬಿಜೆಪಿಯ ಅಣತಿಯಂತೆ ಆಯೋಗ ನಡೆದುಕೊಳ್ಳುತ್ತಿದೆ ಎಂಬುದಕ್ಕೆ ಈ ಬೆಳವಣಿಗೆಗಳ ಸಾಕ್ಷಿ ಎಂದು ಸಿದ್ದರಾಮಯ್ಯ ಆಪಾದಿಸಿದರು.

ಹೈದರಾಬಾದ್ ಕರ್ನಾಟಕ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸಿದರಷ್ಟೇ ಸಾಲದು. ಈಗ ಪ್ರತಿವರ್ಷ ಮೀಸಲಿಡುವ 1,500 ಕೋಟಿ ರೂ. ಅನುದಾನವನ್ನು 3 ಸಾವಿರ ಕೋಟಿಗೆ ಹೆಚ್ಚಿಸಿದರೆ ಹೆಸರು ಬದಲಿಸಿದ್ದಕ್ಕೆ ಅರ್ಥ ಬರುತ್ತದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಏಕಾಂಗಿ ಸ್ಪರ್ಧೆ

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ತಮ್ಮ ಪಕ್ಷ ಇನ್ನು ಮುಂದೆ ಏಕಾಂಗಿಯಾಗಿ ಸ್ಪರ್ಧಿಸಲಿ ಎಂದು ಈಗಾಗಲೇ ಹೇಳಿರುವ ಹಿನ್ನಲೆ ಅವರ ಜೊತೆ ಮೈತ್ರಿ ಇಲ್ಲ. ಎಲ್ಲ ಕ್ಷೇತ್ರಗಳಲ್ಲೂ ಏಕಾಂಗಿಯಾಗಿಯೇ ಕಾಂಗ್ರೆಸ್ ಚುನಾವಣೆ ಎದುರಿಸಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

‘ನನ್ನ ಗಮನಕ್ಕೆ ತನ್ನಿ’

ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಯ ಕುರುಬ, ಕಾಡು ಕುರುಬ, ಜೇಣು ಕುರುಬ, ಗೊಂಡ, ರಾಜ ಗೊಂಡ, ಹಾಲುಮತ ಸಮುದಾಯದವರನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸುವಂತೆ ನಾನು ಕೇಂದ್ರ ಸರರ್ಕಾರಕ್ಕೆ ಶಿಫಾರಸು ಮಾಡಿದ್ದೇನೆ. ಸಿಂಧುತ್ವ ಪ್ರಮಾಣಪತ್ರ ನೀಡುವಾಗ ಅಧಿಕಾರಿಗಳು ತಕರಾರು ಮಾಡಿದರೆ ನನ್ನ ಗಮನಕ್ಕೆ ತನ್ನಿ ಎಂದು ಸಿದ್ದರಾಮಯ್ಯ ಸಮಾರಂಭದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News