×
Ad

ವೈದ್ಯರ ಗ್ರಾಮೀಣ ಸೇವೆ ಕಡ್ಡಾಯ ವಿಚಾರ: 2012ರ ಕಾಯಿದೆಯ ಸಿಂಧುತ್ವ ಎತ್ತಿ ಹಿಡಿದ ಹೈಕೋರ್ಟ್

Update: 2019-09-29 19:58 IST

ಬೆಂಗಳೂರು, ಸೆ.29: ಪದವಿ, ಸ್ನಾತಕೋತ್ತರ ವೈದ್ಯ ಪದವಿ ಪಡೆದ ನಂತರ ವೈದ್ಯರು ಗ್ರಾಮೀಣ ಭಾಗದಲ್ಲಿ ಒಂದು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕೆಂದು ರಾಜ್ಯ ಸರಕಾರ ಜಾರಿಗೊಳಿಸಿದ್ದ 2012ರ ಕಾಯಿದೆಯ ಸಿಂಧುತ್ವವನ್ನು ಹೈಕೋರ್ಟ್ ಎತ್ತಿಹಿಡಿದಿದೆ. 

2015ರಲ್ಲಿ ಕಾಯಿದೆ ಜಾರಿಗೊಳಿಸಿದಾಗ ಬುಷ್ರಾ ಅಬ್ದುಲ್ ಅಲೀಂ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ಮನವಿ ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ, 2012ರ ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ತರಬೇತಿ ಸೇವೆಗಳ ಕಾಯಿದೆಯನ್ನು ಊರ್ಜಿತಗೊಳಿಸಿದೆ. ಅಲ್ಲದೆ, ಸಾರ್ವಜನಿಕ ಉದ್ದೇಶಕ್ಕಾಗಿ ಕಡ್ಡಾಯ ಸೇವೆಗಳನ್ನು ವಿಧಿಸುವ ಅಧಿಕಾರ ಸಂವಿಧಾನದಲ್ಲಿದೆ ಎಂದು ಆದೇಶಿಸಿದೆ. ಅಲ್ಲದೆ, ವೈದ್ಯರ ಸಮಸ್ಯೆಗಳನ್ನು ನೀಗಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸುವಂತೆಯೂ ರಾಜ್ಯ ಸರಕಾರಕ್ಕೆ ಸೂಚಿಸಿದೆ.

ಕಾಯಿದೆ ಉಲ್ಲಂಘಿಸುವ ವೈದ್ಯರಿಗೆ ದಂಡ ವಿಧಿಸುವುದು, ದಂಡದ ಪ್ರಮಾಣ ನಿಗದಿಪಡಿಸುವುದು ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಎರಡು ತಿಂಗಳಲ್ಲಿ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಬೇಕೆಂದು ನ್ಯಾಯಾಲಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಈ ಕಾಯಿದೆ ತಮಗೆ ಅನ್ವಯವಾಗುವುದಿಲ್ಲವೆಂದು ಅಲ್ಪಸಂಖ್ಯಾತ ಸಂಸ್ಥೆಗಳು ವಿನಾಯಿತಿ ಕೇಳುವಂತಿಲ್ಲ. ಆದರೆ, ಹೊಸ ಕಾಯಿದೆ ನಿಮ್ಹಾನ್ಸ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳನ್ನು ನಡೆಸುವವರಿಗೆ ಅನ್ವಯವಾಗುವುದಿಲ್ಲ, ಏಕೆಂದರೆ ಕಾಯಿದೆ ವ್ಯಾಪ್ತಿಗೆ ಅದು ಒಳಪಡುವುದಿಲ್ಲ ಎಂದೂ ನ್ಯಾಯಾಲಯ ಹೇಳಿದೆ.

ಕಾನೂನು ಏಕಪಕ್ಷೀಯವಾಗಿದೆ, ಅಸಂವಿಧಾನಿಕವಾಗಿದೆ ಮತ್ತು ಸಂವಿಧಾನದ ಕಲಂ 14ಕ್ಕೆ ವಿರುದ್ಧವಾಗಿದೆ ಎಂಬ ವಾದವನ್ನು ನ್ಯಾಯಪೀಠ ತಳ್ಳಿಹಾಕಿ, 15 ಲಕ್ಷ ಹಾಗೂ 30 ಲಕ್ಷ ರೂ.ದಂಡದ ಪ್ರಮಾಣ ಅತ್ಯಧಿಕವೇನಲ್ಲವೆಂದೂ ಸಹ ಆದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News