×
Ad

ನಾವು ಬಿಜೆಪಿಯಿಂದ ಗೆದ್ದಿದ್ದೇವೋ, ಇಲ್ಲವೋ ಎಂದು ಅನ್ನಿಸುತ್ತಿದೆ: ಶಾಸಕ ಜಿ.ಕರುಣಾಕರ ರೆಡ್ಡಿ

Update: 2019-09-29 20:02 IST

ಬಳ್ಳಾರಿ, ಸೆ. 29: ಬಳ್ಳಾರಿ ಜಿಲ್ಲೆ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹರಪ್ಪನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಜಿ.ಕರುಣಾಕರ ರೆಡ್ಡಿ, ‘ರಾಜಧಾನಿ ಬೆಂಗಳೂರು ಕೆಲ ಜಿಲ್ಲೆಗಳಿಗೆ ದೂರ ಆಗುತ್ತದೆ ಎಂದು ಪ್ರತ್ಯೇಕ ರಾಜ್ಯ ಮಾಡಲು ಸಾಧ್ಯವೇ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ವಿಜಯನಗರ ನೂತನ ಜಿಲ್ಲೆ ರಚನೆ ಮಾಡುವುದು ಯಾವ ಪುರುಷಾರ್ಥಕ್ಕೆ ಎಂಬುದು ತಿಳಿಯುತ್ತಿಲ್ಲ. ನಾವು ಬಿಜೆಪಿಯಿಂದ ಗೆದ್ದಿದ್ದಿವೋ ಅಥವಾ ಇಲ್ಲವೋ ಎಂದು ಅನ್ನಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಜಿಲ್ಲೆಯಲ್ಲಿ ನಾವು ನಾಲ್ಕು ಜನ ಬಿಜೆಪಿ ಶಾಸಕರಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅನುಭವಿಗಳು. ಅವರ ಮೇಲೆ ಗೌರವವಿದೆ. ಆದರೆ, ಅವರು ಜಿಲ್ಲೆ ವಿಭಜನೆ ಸಂಬಂಧ ನಮ್ಮ ಅಭಿಪ್ರಾಯವನ್ನು ಕೇಳದೆ ಆತುರದ ತೀರ್ಮಾನ ಕೈಗೊಂಡಿದ್ದಾರೆ. ಕೆಲವರ ಹಿತಾಸಕ್ತಿಗೆ ಸಿಎಂ ಮಣಿದಿದ್ದು ಸಲ್ಲ ಎಂದು ಆಕ್ಷೇಪಿಸಿದರು.

ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹರಪನಹಳ್ಳಿ ಬಳ್ಳಾರಿ ಜಿಲ್ಲಾ ಕೇಂದ್ರಕ್ಕೆ ದೂರವಿದ್ದು, ಪ್ರತ್ಯೇಕ ಜಿಲ್ಲೆ ಆಗಬೇಕೆಂದು ಹೋರಾಟ ಆಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣ ಆಗುತ್ತಿದೆ. ಹಂಪಿ, ತುಂಗಭದ್ರ ಅಣೆಕಟ್ಟು ನಮ್ಮ ಹೆಮ್ಮೆ. ಹೊಸಪೇಟೆ ಬಳ್ಳಾರಿಯಿಂದ ಕೇವಲ 60ಕಿಮೀ ದೂರದಲ್ಲಿದೆ ಎಂದು ಹೇಳಿದರು.

ಹೊಸಪೇಟೆ ಬಿಟ್ಟು ಬೇರಾವುದಾದರೂ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಲು ನಮ್ಮ ವಿರೋಧವಿಲ್ಲ. ಜಿಲ್ಲಾ ಕೇಂದ್ರದಿಂದ ದೂರವಿರುವ ಹರಪನಹಳ್ಳಿಯನ್ನೇ ಜಿಲ್ಲೆಯನ್ನಾಗಿ ಮಾಡಲಿ ಎಂದು ಆಗ್ರಹಿಸಿದ ಅವರು, ಬಳ್ಳಾರಿ ಜಿಲ್ಲೆ ಅಖಂಡವಾಗಿರಬೇಕು. ಹೀಗಾಗಿ ಜಿಲ್ಲೆ ವಿಭಜನೆಗೆ ನಮ್ಮ ವಿರೋಧವಿದೆ ಎಂದರು.

ಸಿಎಂ ಯಡಿಯೂರಪ್ಪ ನಮ್ಮ ಶಾಸಕರ ಅಭಿಪ್ರಾಯ ಪಡೆಯಬಹುದಿತ್ತು. ಆದರೆ, ಆತುರದ ತೀರ್ಮಾನ ಕೈಗೊಂಡಿದ್ದು, ಇದನ್ನು ವಿರೋಧಿಸಿ ಬಳ್ಳಾರಿ ಬಂದ್‌ಗೆ ನಮ್ಮ ಬೆಂಬಲವಿದೆ. ಮುಖ್ಯಮಂತ್ರಿಗೆ ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ ಎಂದು ಕರುಣಾಕರ ರೆಡ್ಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News