×
Ad

ಕನ್ನಡ-ತೆಲುಗು ಸಹೋದರ ಸಂಬಂಧದ ಶ್ರೀಮಂತ ಭಾಷೆಗಳು: ನಾ.ಹಂಪಾ ನಾಗರಾಜಯ್ಯ

Update: 2019-09-29 20:06 IST

ಹೈದರಾಬಾದ್, ಸೆ.29: ಕನ್ನಡ ಹಾಗೂ ತೆಲುಗು ಭಾಷೆಗಳು ಅತ್ಯಂತ ಶ್ರೀಮಂತ ಹಾಗೂ ಸಮೃದ್ಧ ಇತಿಹಾಸ, ಸಂಸ್ಕೃತಿ ಪರಂಪರೆಯನ್ನೊಂದಿದ್ದು, ಅಂತಹ ಭಾಷೆ ಬಗ್ಗೆ ಯಾವುದೇ ಕೀಳರಿಮೆ ಬೇಡವೆಂದು ಹಿರಿಯ ಸಾಹಿತಿ ನಾಡೋಜ ಹಂಪಾ ನಾಗರಾಜಯ್ಯ ಹೇಳಿದರು. 

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಶಾಲಾ-ಕಾಲೇಜುಗಳಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹೈದರಾಬಾದ್‌ನ ಉಸ್ಮಾನಿಯಾ ವಿವಿ ಪ್ರೊ.ಜಿ. ರಾಮರೆಡ್ಡಿ ದೂರಶಿಕ್ಷಣ ಕೇಂದ್ರದ ಸಿಲಲ್ವರ್ ಜುಬಿಲಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಮಾಧ್ಯಮ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಮತ್ತು ತೆಲುಗು ಭಾಷೆಗಳು ಅತ್ಯಂತ ಶ್ರೀಮಂತ ಹಿನ್ನೆಲೆಯನ್ನೊಂದಿದ ಭಾಷೆಗಳಾಗಿದ್ದು, ಈ ಎರಡೂ ಭಾಷೆಗಳು ಸೋದರ ಸಂಬಂಧವನ್ನೊಂದಿವೆ. ಕನ್ನಡದ ಮೊದಲ ಕವಿ ಪಂಪ. ಆತನ ಸಹೋದರ ಜಿನವಲ್ಲಭ ತೆಲುಗಿನಲ್ಲಿ ಮಟ್ಟಮೊದಲು ಪದ್ಯ ಬರೆದವನು. ಆ ಮೂಲಕ ಕನ್ನಡ ಮತ್ತು ತೆಲುಗು ಭಾಷೆಗಳು ಸಹೋದರ ಸಂಬಂಧ ಹೊಂದಿದ ಭಾಷೆಗಳಾಗಿವೆ ಎಂದು ಅವರು ಅಭಿಪ್ರಾಯಿಸಿದರು.

ನಾನು ಹುಟ್ಟಿದ್ದು ಶೇ.75ರಷ್ಟು ತೆಲುಗು ಭಾಷೆಯನ್ನು ಮಾತನಾಡುವ ಚಿಕ್ಕಬಳ್ಳಾಪುರದಲ್ಲಿ. ಆದರೆ, ಅಲ್ಲಿನ ತೆಲುಗು ಭಾಷಿಕರು ಕರ್ನಾಟಕ ಬಿಟ್ಟು ಹೋಗುವುದೇ ಇಲ್ಲ. ಅಂದರೆ, ಕನ್ನಡಿಗರಾದ ನಾವು ಅಷ್ಟೊಂದು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ. ಅಂತಹ ಹೃದಯ ವೈಶಾಲ್ಯ ಕನ್ನಡ ಮತ್ತು ಕನ್ನಡಿಗರದ್ದಾಗಿದೆ ಎಂದು ಅವರು ಅಭಿಮಾನಪಟ್ಟರು.

ಕನ್ನಡ ಭಾಷೆ ಅತ್ಯಂತ ಪುರಾತನವಾದುದು, ಹಾಗೆಯೇ ಅದು ಇಡೀ ವಿಶ್ವವನ್ನೇ ವ್ಯಾಪಿಸಿದೆ. ಯಾವುದೇ ಭಾಷೆ ಕೀಳಲ್ಲ, ಯಾವುದೂ ಮೇಲಲ್ಲ. ಎಲ್ಲ ಭಾಷೆಗಳಿಂದಲೂ ಕಲಿಯುವುದು ಬಹಳವಿದೆ. ಆದರೆ ನಮ್ಮ ತಾಯಿ ನುಡಿಯಲ್ಲಿ ಕಲಿತಷ್ಟು ಸುಲಭವಾಗಿ ಬೇರೆ ಭಾಷೆಯಲ್ಲಿ ಕಲಿಯುವುದು ಅಷ್ಟು ಸುಲಭವಲ್ಲವಾದ್ದರಿಂದ ಮಾತೃಭಾಷೆಯಿಂದ ಪರಿಣಾಮಕಾರಿಯಾಗಿ ಕಲಿಯಬಹುದು, ಭಾವನೆಗಳನ್ನು ವ್ಯಕ್ತಪಡಿಸಬಹುದಾಗಿದೆ. ಅದಕ್ಕಾಗಿಯೇ ಕನ್ನಡ ಭಾಷೆಗೆ ಅಂದರೆ ತಾಯಿನುಡಿಗೆ ಹೆಚ್ಚಿನ ಗೌರವ ನೀಡಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಉಸ್ಮಾನಿಯಾ ವಿವಿ ಕುಲಸಚಿವ ಪ್ರೊ. ಸಿ.ಎಸ್. ಗೋಪಾಲರೆಡ್ಡಿ ಮಾತನಾಡಿ, ಕನ್ನಡ, ತೆಲುಗು, ಮಲಯಾಳಂ, ತಮಿಳು ಭಾಷೆಗಳು ಅತ್ಯಂತ ಶ್ರೀಮಂತ ಹಿನ್ನೆಲೆಯನ್ನೊಂದಿದ ಭಾಷೆಗಳಾಗಿದ್ದು, ಈ ಭಾಷೆಗಳಿಗೆ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬರೂ ತಮ್ಮ ತಾಯಿ ನುಡಿಯನ್ನು ತಾಯಿಯಷ್ಟೇ ಪ್ರೀತಿಸಬೇಕು. ತಾಯಿ ಭಾಷೆಯಲ್ಲಿ ಕಲಿಯುವುದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ ಎಂದರು. ನಮ್ಮ ಉಸ್ಮಾನಿಯ ವಿವಿಯಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕನ್ನಡ ವಿಭಾಗಕ್ಕೆ ಸೇರಲು ಪ್ರವೇಶ ಪರೀಕ್ಷೆ ನಡೆಸುತ್ತೇವೆ. ಆದರೆ, ಕೊನೆಗಳಿಗೆಯಲ್ಲಿ ಬಂದವರಿಗೆ ಪ್ರವೇಶ ಪರೀಕ್ಷೆ ಇಲ್ಲದೆಯೂ ನಾವು ನೊಂದಣಿ ನೀಡುತ್ತೇವೆ. ಹಾಗೆಯೇ ಕನ್ನಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನೂ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಹೈದರಾಬಾದ್ ಐಎಫ್‌ಎಲ್ ವಿಶ್ವವಿದ್ಯಾನಿಲಯದ ಅನುವಾದ ಅಧ್ಯಯನ ವಿಭಾಗದಸಹಾಯಕ ಪ್ರಾಧ್ಯಾಪಕ ಪ್ರೊ.ಎ.ಬಿ.ತಾರಕೇಶ್ವರ್ ಮಾತನಾಡಿ, ಎಷ್ಟೇ ಭಾಷೆಗಳನ್ನಾದರೂ ಕಲಿಯಿರಿ. ಆದರೆ, ಮಾತೃಭಾಷೆಯಲ್ಲಿ ಕಲಿಯುವುದರಿಂದ ಹೆಚ್ಚಿನ ಜ್ಞಾನ ಪಡೆದುಕೊಳ್ಳಬಹುದು. ಎಲ್ಲ ಭಾಷೆಗಳಲ್ಲಿನ ಒಳಿತನ್ನು ನಾವು ಪಡೆದುಕೊಂಡು ಹೆಚ್ಚಿನ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದರು. ನಮ್ಮ ಇಂಗ್ಲೀಷ್ ಮತ್ತು ವಿದೇಶಿ ವಿಶ್ವವಿದ್ಯಾನಿಲಯಕ್ಕೆ ಹೆಚ್ಚಿನ ಕನ್ನಡಿಗರು ಬರುತ್ತಿಲ್ಲ, ಹೆಚ್ಚಿನ ಕನ್ನಡಿಗರು ಬಂದು ಈ ವಿದೇಶಿ ಭಾಷೆಗಳ ಜ್ಞಾನವನ್ನು ಪಡೆದು ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಬೇಕು ಎಂದರು.

ಉಸ್ಮಾನಿಯಾ ವಿವಿ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಎಂ.ಲಿಂಗಪ್ಪ ಗೋನಾಳ್, ಹೈದರಾಬಾದ್ ಕನ್ನಡ ವೆಲ್ಫೇರ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಧರ್ಮೇಂದ್ರ ಪೂಜಾರಿ ಬಗೂರಿ, ಹೈದರಾಬಾದ್ ನೃಪತುಂಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಠ್ಠಲ್ ಜೋಷಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ ಮತ್ತಿರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News