ಹೆಣ್ಣು ಋತುಮತಿಯಾಗಿ ಆಫೀಸ್ ಗೆ ಹೋಗುವುದಕ್ಕೂ, ದೇವಸ್ಥಾನಕ್ಕೆ ಹೋಗುವುದಕ್ಕೂ ವ್ಯತ್ಯಾಸವಿದೆ

Update: 2019-09-29 16:26 GMT

ಮೈಸೂರು,ಸೆ.29: ಹೆಣ್ಣು ಋತುಮತಿಯಾದಾಗ ಆಫೀಸ್ ಗೆ ಹೋಗಿ ಕೆಲಸ ಮಾಡುವುದು ಬೇರೆ, ದೇವಸ್ಥಾನಕ್ಕೆ ಪ್ರವೇಶ ಮಾಡುವುದು ಬೇರೆ. ಆ ವ್ಯತ್ಯಾಸವನ್ನು ಮಹಿಳೆಯರು ತಿಳಿದುಕೊಳ್ಳಬೇಕು ಎಂದು ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಹೇಳಿದರು.

ಚಾಮುಂಡಿ ಬೆಟ್ಟದಲ್ಲಿ ರವಿವಾರ ಮೈಸೂರು ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಕೇರಳದ ಅಯ್ಯಪ್ಪ ದೇವಸ್ಥಾನದಲ್ಲಿ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಅವಕಾಶವಿಲ್ಲ. ಇದಕ್ಕೆ ಅನೇಕ ಆಧುನಿಕ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಕೃತಿಗೆ ತಕ್ಕಂತೆ ಹೆಣ್ಣು ಋತುಮತಿಯಾಗುತ್ತಾಳೆ. ಋತುಮತಿಯಾದಾಗ ಆಫೀಸ್ ಗೆ ಹೋಗಿ ಕೆಲಸ ಮಾಡುವುದು ಬೇರೆ, ದೇವಸ್ಥಾನ ಪ್ರವೇಶ ಮಾಡುವುದು ಬೇರೆ. ಈ ಬಗ್ಗೆ ಸುಪ್ರೀಂಕೋರ್ಟ್‍ನಲ್ಲೂ ವಿಚಾರಣೆಯಾಗುವಂತಾಯಿತು ಎಂದರು.

ಜನ ಇದನ್ನು ನಂಬಿದ್ದಾರೆ. ಆದರೂ ಅಲ್ಲಿನ ಕಮ್ಯುನಿಸ್ಟ್ ಸರಕಾರ ವಿರೋಧದ ನಡುವೆಯೂ ಐವರು ಹೆಂಗಸರನ್ನು ದೇವಸ್ಥಾನಕ್ಕೆ ನುಗ್ಗಿಸಿತು. ಹಾಗೇ ನಮ್ಮಲ್ಲಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ಕತೆ ಇದೆ. ಈಗ ಹೆಣ್ಣು ದೇವತೆ ಗಂಡಸರನ್ನು ಅವಮಾನಿಸಿದ್ದಾಳೆ ಎಂದು ಕೋರ್ಟಿಗೆ ಹೋದರೆ ಏನು ಮಾಡುವುದು? ದೇವರು ಅನ್ನೋದು ನಂಬಿಕೆ ವಿಚಾರ. ಹೆಣ್ಣು ದೇವತೆಗೆ ನಾವು ಮೊದಲ ಪೂಜೆ ಸಲ್ಲಿಸುತ್ತೇವೆ. ಎಲ್ಲ ಪಂಥಗಳಲ್ಲೂ ದೇವತೆಗೆ ಅಗ್ರಸ್ಥಾನ. ಆದರೆ ನಮ್ಮ ಜೀವನವೇ ಬೇರೆ ರೀತಿ ಇದೆ. ಅದನ್ನು ಅರಿಯಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News