ಸಾಮಾಜಿಕ ವ್ಯವಸ್ಥೆಯಲ್ಲಿ ಮುಸ್ಲಿಮರು ಮುನ್ನೆಲೆಗೆ ಬರಲಿ: ಅಬ್ದುಸ್ಸಲಾಂ ಪುತ್ತಿಗೆ

Update: 2019-09-29 16:49 GMT

ಗಜೇಂದ್ರಗಡ, ಸೆ.29: ಸಾಮಾಜಿಕ ವ್ಯವಸ್ಥೆಯಲ್ಲಿ ಮುಸ್ಲಿಮರು ಮುನ್ನೆಲೆಗೆ ಬರುವುದು ಇಂದಿನ ಅಗತ್ಯವಾಗಿದೆ ಎಂದು ‘ವಾರ್ತಾಭಾರತಿ’ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಹೇಳಿದ್ದಾರೆ.

ನಗರದ ಶಾದಿಮಹಲ್‌ನಲ್ಲಿ ಡಿವೈಎಫ್‌ಐ ಹಾಗೂ ಅಂಜುಮನ್ ಎ ಇಸ್ಲಾಂ ಕಮಿಟಿ ಸಹಯೋಗದಲ್ಲಿ ನಡೆದ ಮುಸ್ಲಿಂ ಯುವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಮುಸ್ಲಿಮರು ಇತರ ಧರ್ಮದ ಸಮುದಾಯಗಳಿಂದ ಧಾರ್ಮಿಕವಾಗಿ ದೂರ ಉಳಿದು, ಇಸ್ಲಾಂ ಧರ್ಮ ಮತ್ತು ಮುಸ್ಲಿಂ ಸಮಾಜದ ಕುರಿತು ಸಮಾಜದಲ್ಲಿ ಪರಿಚಯಿಸಿಕೊಳ್ಳುವ ಪ್ರಾಮಾಣಿಕ ಕೆಲಸ ಮಾಡದಿರುವುದನ್ನೇ ಬಂಡವಾಳವಾಗಿಸಿಕೊಂಡು ರಾಜಕೀಯ ಲಾಭಕ್ಕಾಗಿ ಮುಸ್ಲಿಂ ಸಮುದಾಯದ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರಗಳು ಹಾಗೂ ಅನುಮಾನಗಳನ್ನು ಹುಟ್ಟು ಹಾಕಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮುಸ್ಲಿಂ ಸಮುದಾಯ ಹಾಗೂ ಅನ್ಯ ಧರ್ಮಿಯರ ನಡುವೆ ದ್ವೇಷದ ಗೋಡೆಗಳನ್ನು ಕಟ್ಟಲಾಗಿದೆ. ಆ ಗೋಡೆಗಳನ್ನು ನಾವೇ ಬೀಳಿಸಿ ಜಾತ್ಯತೀತ ಹಾಗೂ ಧರ್ಮನಿರಪೇಕ್ಷತೆಯ ಬಾಂಧವ್ಯವನ್ನು ಎಲ್ಲಾ ಸಮುದಾಯದ ಜನರೊಂದಿಗೆ ಬೆಳೆಸಿಕೊಳ್ಳಬೇಕಾಗಿದೆ. ಸಮಾಜಕ್ಕೆ ನಾವೇ ನಮ್ಮನ್ನು ಪರಿಚಯಿಸಿಕೊಳ್ಳುವ ಮೂಲಕ ನಮ್ಮ ಬಗೆಗೆ ಎದ್ದಿರುವ ಅಪನಂಬಿಕೆಗಳನ್ನು ತೊಡೆದು ಹಾಕಲು ಮುಂದಾಗಬೇಕು. ಅದಕ್ಕಾಗಿ ಇಂದು ರೈತರು, ಅಸಂಘಟಿತ ಕಾರ್ಮಿಕರು, ದಲಿತರು ಹಾಗೂ ಮಹಿಳೆಯರ ಹಕ್ಕುಗಳಿಗಾಗಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈಎಫ್‌ಐನ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಹಾಗೂ ವಕೀಲ ಎಂ.ಎಚ್.ಕೋಲ್ಕಾರ ಮಾತನಾಡಿದರು. ಪುರಸಭೆ ಮಾಜಿ ಸದಸ್ಯ ಎಂ.ಎಸ್.ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ‘ಭಾರತದ ಮುಸ್ಲಿಮರು’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಮುಖಂಡರಾದ ಎಂ.ಬಿ.ಒಂಟಿ, ದಾದು ಹಣಗಿ, ಮುಕ್ತುಂಸಾಬ ಮುಧೋಳ, ಶರಣು ಪೂಜಾರ, ಅಶ್ರಫಲಿ ಗೋಡೆಕಾರ, ರವೀಂದ್ರ ಹೊನವಾಡ, ಗುರುಲಿಂಗಯ್ಯ ಓದುಸುಮಠ, ಎಂ.ಬಿ.ಕಂದಗಲ್ಲ, ಎಚ್.ಡಿ.ತಟಗಾರ ಕೌಸರಬಾನು, ಮುರ್ತುಜಾ ಡಾಲಾಯತ್, ಮಾರುತಿ ಚಿಟಗಿ, ಆರ್.ಕೆ.ಬಾಗವಾನ, ಬಾಲು ರಾಠೋಡ ಉಪಸ್ಥಿತರಿದ್ದರು.

ದಾವಲಸಾಬ ತಾಳಿಕೋಟಿ ಸ್ವಾಗತಿಸಿದರು. ಮಾಸುಮಲಿ ಮದಗಾರ ವಂದಿಸಿದರು. ಫಯಾಝ್‌ತೋಟದ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News