ಅತಿವೃಷ್ಠಿ ಹಾನಿ ಕುರಿತು ಪರಿಶೀಲನೆಗೆ ಮೂರು ದಿನಗಳ ಪ್ರವಾಸ: ಸಿಎಂ ಯಡಿಯೂರಪ್ಪ
ದಾವಣಗೆರೆ, ಸೆ.29: ಉತ್ತರ ಕರ್ನಾಟಕದ ಅತಿವೃಷ್ಠಿಯಿಂದಾಗಿರುವ ಹಾನಿ ಕುರಿತು ಮತ್ತು ಅಲ್ಲಿನ ಪ್ರಗತಿ ಪರಿಶೀಲನೆ ನಡೆಸಲು ಮೂರು ದಿವಸ ಪ್ರವಾಸ ಮಾಡಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ.3 ರಂದು ಸಚಿವ ಸಂಪುಟ ಸಭೆಯಿದ್ದು, ಅಲ್ಲಿ ಸೂಕ್ತ ತೀರ್ಮಾನ ಕೈಗೊಂಡು 4,5 ಮತ್ತು 6 ರಂದು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜಿಲ್ಲಾಧಿಕಾರಿಗಳು ಸಂತ್ರಸ್ತರ ಬಗ್ಗೆ ಯಾವ ರೀತಿ ಕ್ರಮ ಕೈಗೊಂಡಿದ್ದಾರೆ ಮತ್ತು ರಸ್ತೆ, ಮನೆ ಪರಿಹಾರ ಕ್ರಮದ ಬಗ್ಗೆ ಮೂರು ದಿವಸಗಳ ಕಾಲ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಕೇಂದ್ರ ಸರಕಾರದಿಂದ ಶೀಘ್ರವೇ ಅನುದಾನ ಬರಲಿದೆ. ಅಲ್ಲಿಯ ತನಕ ರಾಜ್ಯ ಸರಕಾರದ ಹಣದಿಂದ ಅತಿವೃಷ್ಠಿ ಪ್ರದೇಶಗಳ ನೆರವು ನೀಡುವ ಕಾರ್ಯಗಳು ಮುಂದುವರೆಯಲಿವೆ. ಈಗಾಗಲೇ ಸಚಿವರು ಅತಿವೃಷ್ಠಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಅದರೆ ಒಂದು ಕಡೆ ಬರ ಪರಿಸ್ಥಿತಿಯೂ ಉಂಟಾಗಿದೆ. ಈ ನಿಟ್ಟಿನಲ್ಲಿ ಆ ಪ್ರದೇಶಗಳ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಬಳ್ಳಾರಿ ಜಿಲ್ಲೆ ಪ್ರತ್ಯೇಕ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ದೊಡ್ಡ ಜಿಲ್ಲೆಗಳ ಸಣ್ಣ ಜಿಲ್ಲೆಗಳಾಗಿ ರೂಪಿಸುವ ಕುರಿತು ಪ್ರಸ್ತಾವನೆ ಬಂದಿದೆ. ಅದರೆ ಕೆಲವರು ವಿರೋಧ ಮಾಡಿದ್ದಾರೆ. ಈ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದು ಮುಂದುವರೆಯುವುದಾಗಿ ಅವರು ತಿಳಿಸಿದರು.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಕುರಿತು ಅಲ್ಲಿನ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದು, ಇಲ್ಲಿನ ಜನ ಸಂಕಷ್ಟ ಅನುಭವಿಸುತ್ತಿದ್ದು, ಈ ನಿಟ್ಟಿನಲ್ಲಿ ಮುಂದೂಡುವಂತೆ ಮನವಿ ಮಾಡಿದ್ದಾರೆ. ಅದ್ದರಿಂದ ಈ ಬಾರಿ ಬೆಂಗಳೂರಿನಲ್ಲಿ ಅಧಿವೇಶನ ನಡೆಸಲಾಗುವುದು ಎಂದು ಹೇಳಿದರು.